ಋತುಚಕ್ರದ ನೈರ್ಮಲ್ಯ ಕಾರ್ಯಕ್ರಮಗಳ ಮೂಲಕ 2025ರ ವೇಳೆಗೆ 2 ಲಕ್ಷ ಮಹಿಳೆಯರು ಮತ್ತು ಬಾಲಕಿಯರಿಗೆ ಅಮೆಜಾನ್ ನೆರವು

ಬೆಂಗಳೂರು, ಮೇ 26, 2025 

  ಭಾರತದಾದ್ಯಂತ 130ಕ್ಕೂ ಹೆಚ್ಚು ಹಳ್ಳಿಗಳು ಮತ್ತು 14 ನಗರಗಳಲ್ಲಿ ಸೌಲಭ್ಯ ವಂಚಿತ ಸಮುದಾಯಗಳ 50,000ಕ್ಕೂ ಹೆಚ್ಚು ಯುವತಿಯರು ಮತ್ತು ಮಹಿಳೆಯರಿಗೆ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ಉಪಕ್ರಮಗಳ ನೆರವು ಕಲ್ಪಿಸಲಾಗಿದೆ. 
• ʼಗ್ರಾಮ ಮಿತ್ರʼ ಮತ್ತು ʼಪ್ರಗತಿ ಮಿತ್ರʼ ಕಾರ್ಯಕ್ರಮಗಳ ಮೂಲಕ ಮುಟ್ಟಿನ ನೈರ್ಮಲ್ಯದ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆ ನೀಡಲಾಗುವುದು. ಮುಟ್ಟಿನ ಬಗೆಗಿನ ಕಳಂಕ ನಿವಾರಿಸಲು ನೆರವು ಒದಗಿಸಲಾಗುವುದು. ಕನಿಷ್ಠ ತ್ಯಾಜ್ಯ, ಕನಿಷ್ಠ ಮಾಲಿನ್ಯದ ಜೊತೆಗೆ ಸಂಪನ್ಮೂಲಗಳ ಸದ್ಬಳಕೆಯ ಗ್ರಾಮ ಆರ್ಥಿಕತೆಗೆ ಚಾಲನೆ ನೀಡುವ ಮೂಲಕ ಸುಸ್ಥಿರ ಜೀವನೋಪಾಯ ಸೃಷ್ಟಿಸಲಿದೆ. 
• ʼಪ್ರಯತ್ನʼ ಸ್ಯಾನಿಟರಿ ಪ್ಯಾಡ್ ತಯಾರಿಕಾ ಘಟಕಗಳನ್ನು ಮಹಿಳೆಯರಿಗಾಗಿ ಮಹಿಳೆಯರಿಂದಲೇ ನಿರ್ವಹಿಸಿ ಆರ್ಥಿಕ ಸ್ವಾತಂತ್ರ್ಯ ಸೃಷ್ಟಿಸುವ ಮೂಲಕ ಮುಟ್ಟಿನ ಆರೋಗ್ಯದ ಬಗೆಗಿನ ಸಮುದಾಯದ ಧೋರಣೆಯನ್ನು ಬದಲಾಯಿಸಲಿದೆ.

ಬೆಂಗಳೂರು, ಮೇ 26, 2025: ಅಮೆಜಾನ್ ಇಂಡಿಯಾ ತನ್ನ ಮಹಿಳಾ ಆರೋಗ್ಯ ಉಪಕ್ರಮದ ಮುಂದಿನ ಹಂತವನ್ನು ಬೆಂಗಳೂರಿನ ಸಿಂಗಹಳ್ಳಿ ಸಮುದಾಯ ಕೇಂದ್ರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿತು. 

ಸ್ಥಳೀಯವಾಗಿ ತಯಾರಿಸಿದ ಮುಟ್ಟಿನ (ಸ್ಯಾನಿಟರಿ) ಪ್ಯಾಡ್ನಂತಹ ನೈರ್ಮಲ್ಯ ಉತ್ಪನ್ನಗಳು, ಶಿಕ್ಷಣ ಮತ್ತು ಉದ್ಯಮಶೀಲತಾ ಅವಕಾಶಗಳ ಮೂಲಕ ಋತುಚಕ್ರಕ್ಕೆ ಸಂಬಂಧಿಸಿದ ನೈರ್ಮಲ್ಯ, ಆರೋಗ್ಯ, ತಿಳಿವಳಿಕೆ ಹಾಗೂ ಮುಟ್ಟಿನ ಪ್ಯಾಡ್ಗಳ ಕೊರತೆ ಪರಿಹರಿಸುವ ಈ ಕಾರ್ಯಕ್ರಮವು 2025ರ ವೇಳೆಗೆ 2,00,000 ಮಹಿಳೆಯರು ಮತ್ತು ಬಾಲಕಿಯರನ್ನು ತಲುಪುವ ಮಹತ್ವಾಕಾಂಕ್ಷಿ ಗುರಿ ಹೊಂದಿದೆ. 

ಸದ್ಯಕ್ಕೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ನಾಲ್ಕು ನೈರ್ಮಲ್ಯ ನ್ಯಾಪ್ಕಿನ್ ತಯಾರಿಕಾ ಘಟಕಗಳನ್ನು ನಿರ್ವಹಿಸುತ್ತಿರುವ ಅಮೆಜಾನ್, ಈಗಾಗಲೇ 130 ಹಳ್ಳಿಗಳು ಮತ್ತು 14 ನಗರಗಳಲ್ಲಿ ಸೌಲಭ್ಯ ವಂಚಿತ ಸಮುದಾಯಗಳ 50,000 ಕ್ಕೂ ಹೆಚ್ಚು ಮಹಿಳೆಯರು ಮತ್ತು ಬಾಲಕಿಯರಿಗೆ ನೆರವಾಗಿದೆ. ಈ ಉಪಕ್ರಮದ ಮೂಲಕ, ಮುಟ್ಟಿನ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಸುಧಾರಿಸುವುದರ ಜೊತೆಗೆ ಸುಸ್ಥಿರ ಜೀವನೋಪಾಯದ ನೆರವಿನಿಂದ ಅಮೆಜಾನ್ 2027ರ ವೇಳೆಗೆ 500ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ ನೆರವಾಗಲಿದೆ.  

 ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕಗಳು ಮಣ್ಣಿನಲ್ಲಿ ಕೊಳೆಯುವ ಮುಟ್ಟಿನ ನ್ಯಾಪ್ಕಿನ್ಗಳನ್ನು ಪ್ರತಿ ಗಂಟೆಗೆ 1,200ರಂತೆ ತಯಾರಿಸುವ ಸಾಮರ್ಥ್ಯ ಹೊಂದಿವೆ. ಈ ಘಟಕಗಳು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸುತ್ತವೆ. ಎಲ್ಲಾ ನ್ಯಾಪ್ಕಿನ್ಗಳನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅನುಮೋದಿತ, ಮಣ್ಣಿನಲ್ಲಿ ಶೇಕಡ 100ರಷ್ಟು ಕೊಳೆಯುವ ಕಚ್ಚಾ ವಸ್ತುಗಳಿಂದ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಆರೋಗ್ಯಕರ ಉತ್ಪನ್ನಗಳ ಲಭ್ಯತೆಯ ಕೊರತೆಗೆ ಈ ಉತ್ಪನ್ನಗಳು ಸುಸ್ಥಿರ ಪರ್ಯಾಯ ಒದಗಿಸುತ್ತವೆ. ಲಾಭರಹಿತ ಪಾಲುದಾರರಾದ ವ್ಯೋಮಿನಿ ಹಾಗೂ ಶಿ ಆ್ಯಂಡ್‌ ವಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕೇಂದ್ರಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯತ್‌ಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮಹಿಳಾ ಉದ್ಯಮಿಗಳು ಈ ತಯಾರಿಕಾ ಘಟಕಗಳನ್ನು ನಿರ್ವಹಿಸುತ್ತಿದ್ದಾರೆ.

ಅಮೆಜಾನ್ ಲಾಜಿಸ್ಟಿಕ್ಸ್ ಇಂಡಿಯಾದ ಉಪಾಧ್ಯಕ್ಷೆ ಡಾ. ಕರುಣಾ ಶಂಕರ್ ಪಾಂಡೆ ಅವರು ಮಾತನಾಡಿ, "ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿರುವ ಮುಟ್ಟಿನ ಕುರಿತು ಭಾರತದ ಅನೇಕ ಭಾಗಗಳಲ್ಲಿ ಅಸಹ್ಯ ಭಾವನೆ ಮನೆ ಮಾಡಿದೆ. ನಮ್ಮ ವಿಶಿಷ್ಟ ಕಾರ್ಯಕ್ರಮಗಳು ಈ ಸಮಸ್ಯೆಯನ್ನು ನೇರ ಹಾಗೂ ರಚನಾತ್ಮಕ ರೀತಿಯಲ್ಲಿ ನಿಭಾಯಿಸುತ್ತಿವೆ" ಎಂದು ಹೇಳಿದ್ದಾರೆ.

 "ಅಮೆಜಾನ್‌ನಲ್ಲಿ, ಮಹಿಳೆಯರನ್ನು ನಾವೀನ್ಯತೆ, ಉದ್ಯಮ ಮತ್ತು ಸಮುದಾಯ ಪರಿವರ್ತನೆಯ ಕೇಂದ್ರ ಭಾಗದಲ್ಲಿ ಇರಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದರ ಅರ್ಥವನ್ನು ನಾವು ಮರುಕಲ್ಪಿಸುತ್ತಿದ್ದೇವೆ. ಇದೊಂದು ನೈರ್ಮಲ್ಯವನ್ನು ಮೀರಿದ ಉಪಕ್ರಮವಾಗಿದೆ. ಇದು ಆರ್ಥಿಕ ಅವಕಾಶವನ್ನು ಉತ್ತೇಜಿಸಲಿದೆ. ದೀರ್ಘಕಾಲದ ಕಳಂಕಗಳನ್ನು ನಿವಾರಿಸುತ್ತಿದೆ. ಸ್ಥಳೀಯ ನಾಯಕತ್ವವನ್ನು ರೂಪಿಸುತ್ತಿದೆ. ಸೌಲಭ್ಯ ಲಭ್ಯತೆಯಿಂದ ಹಿಡಿದು ಕ್ರಿಯಾಶೀಲದವರೆಗೆ ನಾವು ಮಹಿಳೆಯರು ತಮಗಾಗಿ ಮತ್ತು ಮುಂದಿನ ಪೀಳಿಗೆಗೆ ಬದಲಾವಣೆ ಮುನ್ನಡೆಸಲು ಅವಕಾಶ ಮಾಡಿಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ.

 2021ರಲ್ಲಿ ಪ್ರಾರಂಭಿಸಲಾಗಿರುವ ಅಮೆಜಾನ್‌ನ ʼಗ್ರಾಮ ಮಿತ್ರʼ ಮತ್ತು ʼಪ್ರಗತಿ ಮಿತ್ರʼ ಕಾರ್ಯಕ್ರಮಗಳು, ಸಮುದಾಯಗಳಲ್ಲಿನ ಹದಿಹರೆಯದ ಬಾಲಕಿಯರು ಮತ್ತು ಮಹಿಳೆಯರಲ್ಲಿ ಮುಟ್ಟಿನ ಕುರಿತ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ನೆರವು ಒದಗಿಸುತ್ತಿವೆ. ಈ ಸ್ಥಳೀಯ ಸಮುದಾಯ ರಾಯಭಾರಿಗಳು, ತಮ್ಮ ನೆರೆಹೊರೆಯಲ್ಲಿನ ಶಾಲೆಗಳು, ಗ್ರಾಮೀಣ ಶಿಶುಪಾಲನಾ ಕೇಂದ್ರಗಳಾಗಿರುವ ಅಂಗನವಾಡಿಗಳು ಮತ್ತು ಸ್ವ-ಸಹಾಯ ಗುಂಪುಗಳಲ್ಲಿ ಮಾಹಿತಿದಾಯಕ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತವೆ.

ಈ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳು ಈ ಕೆಳಕಂಡ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತವೆ: 
ಆರೋಗ್ಯಕರ ನಡವಳಿಕೆಗಳ ಅಳವಡಿಕೆ: ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಸಂಬಂಧಿ ನಡವಳಿಕೆಗಳನ್ನು ಪ್ರೋತ್ಸಾಹಿಸುವುದು, ಇದರಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಸ್ವಚ್ಛ ಬಟ್ಟೆಯ ಬಳಕೆಯ ಮಹತ್ವ, ಸಮರ್ಪಕ ನೈರ್ಮಲ್ಯ ನಿರ್ವಹಣೆ, ಆಹಾರ ಮತ್ತು ಪೋಷಣೆಯ ಮೇಲೆ ಗಮನ ಕೇಂದ್ರೀಕರಿಸುವುದು.
ತಪ್ಪು ಕಲ್ಪನೆ ದೂರ ಮಾಡುವುದು: ಮುಟ್ಟಿನ ಬಗೆಗಿನ ತಪ್ಪು ಕಲ್ಪನೆಗಳು ಮತ್ತು ನಿಷೇಧಗಳನ್ನು ಪ್ರಶ್ನಿಸುವುದು, ನೈಸರ್ಗಿಕ ಜೈವಿಕ ಪ್ರಕ್ರಿಯೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು.

ಪೂರಕ ಪರಿಸರ ನಿರ್ಮಿಸುವುದು: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮಹಿಳೆಯರು ಮತ್ತು ಬಾಲಕಿಯರಿಗೆ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವುದು. ಮಹಿಳೆಯರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ದೊರೆಯುವುದನ್ನು ಖಚಿತಪಡಿಸುವುದು.

ಇಲ್ಲಿಯವರೆಗೆ, 60 ಮಹಿಳೆಯರು ನೇರ ಉದ್ಯೋಗ ಪಡೆದಿದ್ದಾರೆ. ಇನ್ನೂ 200 ಮಹಿಳೆಯರು ಪರೋಕ್ಷವಾಗಿ ಮಾರಾಟಗಾರರಾಗಿ (ಸೇಲ್ಸ್ ಚಾಂಪಿಯನ್‌) ತೊಡಗಿಸಿಕೊಂಡಿದ್ದಾರೆ. ಈ ಮಹಿಳೆಯರು ತಮ್ಮ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಅನುಕೂಲಕರ ಕೆಲಸದ ಸಮಯದ ನೆರವಿನಿಂದ ತಿಂಗಳಿಗೆ ಸರಿ ಸುಮಾರು ₹ 17,000 ಲಾಭ ಗಳಿಸುವ ನಿರೀಕ್ಷೆಯಿದೆ. 

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಉದ್ಯಮಶೀಲತೆ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿದ ಸಮಗ್ರ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸುತ್ತಾರೆ.

ಈ ತರಬೇತಿಯ ಪಠ್ಯಕ್ರಮವು ನಾಲ್ಕು ಪ್ರಮುಖ ಮಾದರಿಗಳನ್ನು ಒಳಗೊಂಡಿದೆ: 
ತಿಳಿವಳಿಕೆ ಮೂಡಿಸುವುದು ಮತ್ತು ನಡವಳಿಕೆಯಲ್ಲಿ ಬದಲಾವಣೆ, ಉತ್ಪನ್ನದ ಪ್ರಚಾರ ಮತ್ತು ಮಾರಾಟ, ಯಂತ್ರಗಳ ಕಾರ್ಯಾಚರಣೆ ಮತ್ತು ಹಣಕಾಸು ನಿರ್ವಹಣೆ. 

ಈ ಸಮಗ್ರ ಸ್ವರೂಪದ ವಿಧಾನವು ಮಹಿಳೆಯರಿಗೆ ನಾಯಕತ್ವ ಕೌಶಲ ಮತ್ತು ಪ್ರಾಯೋಗಿಕ ವಹಿವಾಟಿನ ಜ್ಞಾನದ ವಿಷಯದಲ್ಲಿ ಸಜ್ಜುಗೊಳಿಸುತ್ತದೆ. ಇದರಲ್ಲಿ ಮುಟ್ಟಿನ ನೈರ್ಮಲ್ಯದ ಬಗೆಗಿನ ವಿಶೇಷ ಶಿಕ್ಷಣವೂ ಸೇರಿದೆ. ಈ ಉಪಕ್ರಮವು ಉದ್ಯೋಗದ ಹೊರತಾಗಿ ದೀರ್ಘಕಾಲೀನ ಉದ್ಯಮಶೀಲ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಸಮುದಾಯ ನಾಯಕತ್ವವನ್ನು ಬಲಪಡಿಸುತ್ತದೆ. 

50ಕ್ಕೂ ಹೆಚ್ಚು ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರಗಳು ಮತ್ತು ತ್ಯಾಜ್ಯ ದಹನ ಮಾಡುವ ಸಾಧನ ಅಳವಡಿಸಲು ಅಮೆಜಾನ್ ನೆರವಾಗಲಿದೆ.

 ಮುಟ್ಟಿನ ಸಂಬಂಧಿತ ಕಳಂಕ ನಿವಾರಿಸಲು ಮತ್ತು ಆರೋಗ್ಯ ಜಾಗೃತಿ ಉತ್ತೇಜಿಸಲು ಮನೆ-ಮನೆಗೆ ತೆರಳಿ ಮಾಹಿತಿ ನೀಡಲು ತರಬೇತಿ ಪಡೆದ 243 ಮಹಿಳಾ ಕಮ್ಯುನಿಟಿ ಚಾಂಪಿಯನ್‌ರ ವ್ಯಾಪಕ ಜಾಲದ ಮೂಲಕ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಅಮೆಜಾನ್ ವಿಸ್ತರಿಸುತ್ತಲೇ ಇದೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.