ಭೂಮಾಫಿಯಾ ಜತೆಗೆ ಭಾಗಿಯಾದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮಾರಸಂದ್ರ ಮುನಿಯಪ್ಪ ಅವರು ಒತ್ತಾಯಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ನವ ಕರ್ನಾಟಕ ನಿರ್ಮಾಣ ಆಂದೋಲನ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾರಸಂದ್ರ ಮುನಿಯಪ್ಪ ಅವರು ಮಾತನಾಡಿದರು.
ಭೂಮಾಫಿಯಾ ಜತೆಗೆ ಭಾಗಿಯಾದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮಾರಸಂದ್ರ ಮುನಿಯಪ್ಪ ಅವರು ಒತ್ತಾಯಿಸಿದರು.
ಸುಮಾರು 250 ಕೋಟಿ ಬೆಲೆಬಾಳುವ ದಲಿತರ ಭೂಮಿ ಕಬಳಿಸಲು ಭೂಮಾಫಿಯಾಗಳೊಂದಿಗೆ ಪಾಲುದಾರರಾಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್.
ದಲಿತ ಕುಟುಂಬದವರನ್ನು ಭೂಮಿಯಿಂದ ಹೊರಹೋಗುವಂತೆ ಬೆದರಿಕೆ ಹಾಕಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ದೂರು ಸ್ವೀಕರಿಸದ ಸಂಪಿಗೆಹಳ್ಳಿ ಮತ್ತು ಕೊತ್ತನೂರು ಪೊಲೀಸರು
ದಲಿತರ ಭೂಕಬಳಿಕೆಗೆ ಮುಂದಾಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ರವರನ್ನು ಸಂಪುಟದಿಂದ ಕೈಬಿಡಬೇಕೆಂದು ನವ ಕರ್ನಾಟಕ ನಿರ್ಮಾಣ ಆಂದೋಲದ ಆಗ್ರಹ
ಬೆಂಗಳೂರು ಉತ್ತರ. ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ಜಕ್ಕೂರು ಅಂಚೆ, ಚೊಕ್ಕನಹಳ್ಳಿ ಗ್ರಾಮದ ದಲಿತ ಮುನಿರಾಮಯ್ಯರವರಿಗೆ ದಿನಾಂಕ: 06.09.1958 ರಂದು ಚೊಕ್ಕನಹಳ್ಳಿ ಸರ್ವೆ ನಂ. 29/3ರ 3 ಎಕರೆ 32 ಗುಂಟೆ ಜಮೀನು ಸರ್ಕಾರದಿಂದ ಮಂಜೂರಾಗಿರುತ್ತದೆ. ಮುನಿರಾಮಯ್ಯ ಪವತಿ ನಂತರ ಇವರ ಮಗ ಮುನಿಆಂಜಿನಪ್ಪನವರ ಕುಟುಂಬದವರೇ ಸ್ವಾಧೀನದಲ್ಲಿರುತ್ತಾರೆ. ಅವಿದ್ಯಾವಂತರಾದ ಮುನಿಆಂಜಿನಪ್ಪ ಇವರ ಕುಟುಂಬದವರಿಗೆ ಮೋಸ ಮಾಡಿ ಸದರಿ ಜಮೀನನ್ನು ನೀತಾ ಸಿ ಪಟೇಲ್ ಮತ್ತು ಕಣ್ಣಮ್ಮ ರವಿಂದ್ರನ್‌ರವರು ಸರ್ಕಾರದ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ನೊಂದಣಿ ಮಾಡಿಸಿಕೊಂಡಿರುತ್ತಾರೆ.
ಕಾನೂನುಬಾಹಿರವಾಗಿ ನಡೆದ ಈ ನೊಂದಣಿಯ ಬಗ್ಗೆ ಮುನಿಆಂಜಿನಪ್ಪ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ ಮತ್ತು ಸದರಿ ಜಮೀನಿನಲ್ಲಿ ಇದೇ ಕುಟುಂಬದವರು ನಿರಂತರವಾಗಿ ಸ್ವಾಧೀನಾನುಭವದಲ್ಲಿರುತ್ತಾರೆ. ಈ ವಿಷಯದಲ್ಲಿ ಮುನಿಆಂಜಿನಪ್ಪರವರು ಮಾನ್ಯ ಸಿಸಿಹೆಚ್ 29 ರಲ್ಲಿ ಅಡ್ವರ್ಸ್ ಪೊಜಿಸನ್ ಕೇಸನ್ನು ದಾಖಲಿಸಿದ್ದು, ಓ.ಎಸ್.ನಂ. 16266/2002 ರಲ್ಲಿ ಪರಭಾರೆ ಮಾಡದಂತೆ ಮಧ್ಯಂತರ ಆದೇಶ ಆಗಿರುತ್ತದೆ ಸದರಿ ಆದೇಶವನ್ನು ಉಲ್ಲಂಘಿಸಿ ಈ ಕೆಳಕಂಡಂತೆ ಹಲವರ ಕೈಬದಲಾಗಿದೆ. ನೀತಾ ಸಿ ಪಟೇಲ್ ಮತ್ತು ಕಣ್ಣಮ್ಮ ರವಿಂದ್ರನ್‌ರವರು ಕಾನೂನು ಬಾಹಿರವಾಗಿ ಆಡಂ ಅಲಿಯಾಸ್ ಇಬ್ರಾಹಿಂರವರಿಗೆ ಮಾರಾಟ ಮಾಡಿರುತ್ತಾರೆ. ನಂತರ ಇಬ್ರಾಹಿಂರವರು ಪನ್‌ಬಾಯಿ ಮತ್ತು ಕರ್ಷನ್ ಪಟೇಲ್‌ರವರಿಗೆ ಮಾರಾಟ ಮಾಡಿರುತ್ತಾರೆ. ಪನ್‌ಬಾಯಿ ಮತ್ತು ಕರ್ಷನ್ ಪಟೇಲ್‌ರವರು ಅಲ್ಲಂ ಇನ್ಸಿನೆಟ್ ಇಂಡಿಯಾ ಪ್ರೈ.ಲಿ ಕಂಪನಿಯವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಿರುತ್ತಾರೆ. ಮಾನ್ಯ ಸಿಸಿಹೆಚ್ 74 ರಲ್ಲಿ ಮಿಸ್ ನಂ. 25147/2015 ರಲ್ಲಿ ದಿನಾಂಕ: 21.06.2019 ರಲ್ಲಿ ಪರಭಾರೆ ಮಾಡದಂತೆ ಮುನಿಆಂಜಿನಪ್ಪ ಕುಟುಂಬದವರ ಪರವಾಗಿ ಮಧ್ಯಂತರ ಆದೇಶ ನೀಡಿದ್ದು, ಸದರಿ ಆದೇಶವು ದಿನಾಂಕ: 05.08.2022 ರಲ್ಲಿ ಮುಂದಿನ ಆದೇಶದ ವರೆಗೂ ಆದೇಶ ಚಾಲ್ತಿಯಲ್ಲಿರುತ್ತದೆ.
ಅಲ್ಲಂ ಇನ್ಸಿನೆಟ್ ಇಂಡಿಯಾ ಕಂಪನಿಯವರು ಸಾರ್ವಜನಿಕರಿಂದ ಹತ್ತಾರು ಕೋಟಿ ವಸೂಲಿ: ಸದರಿ ಜಮೀನಿನಲ್ಲಿ ಮುನಿಆಂಜಿನಪ್ಪ ಮತ್ತು ಅವರ ಕುಟುಂಬದವರು ಅನುಭವದಲ್ಲಿದ್ದರೂ ಅಲ್ಲಂ ಇನ್ಸಿನೆಟ್ ಇಂಡಿಯಾ ಕಂಪನಿಯವರು ಈ ಜಮೀನಿನಲ್ಲಿ ನಿವೇಶನ ಹಂಚುವುದಾಗಿ ಸುಮಾರು 30-40 ಕೋಟಿ ರೂಪಾಯಿಗಳನ್ನು ಸಾರ್ವಜನಿಕರಿಂದ ವಸೂಲಿ ಮಾಡಿರುವುದಾಗಿ ನಮ್ಮ ರಾಜ್ಯಸಮಿತಿಗೆ ತಿಳಿದುಬಂದಿದೆ.
ಇನ್ಸಿನೆಟ್ ಇಂಡಿಯಾ ಪ್ರೈ.ಲಿ ಕಂಪನಿಯ ಸಿಬ್ಬಂಧಿಗಳು ಮತ್ತು ರೌಡಿಗಳಿಂದ ಅಕ್ರಮ ಪ್ರವೇಶಕ್ಕೆ ಯತ್ನ :
ಅಕ್ರಮವಾಗಿ ಖರೀದಿ ಮಾಡಿದ ಸ್ಟೀಫನ್. ಗುಲಾಂ ಮುಸ್ತಾಫ, ಆರ್.ಟಿ.ನಗರದ ಸತೀಶ, ಆರ್.ಟಿ.ನಗರ ವಾಸಿ ಕಿಟ್ಟಿ ಅಲಿಯಾಸ್ ಕೃಷ್ಣ, ಶಾಂಪುರದ ವಾಸಿ ಜಗದೀಶ ಇವರುಗಳು ರೌಡಿಗಳ ಸಹಾಯದಿಂದ ರಾತ್ರೋರಾತ್ರಿ ಸದರಿಯವರ ಜಮೀನನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಮುನಿಆಂಜಿನಪ್ಪನವರ ಕುಟುಂಬದವರು ತಕ್ಷಣ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದು, ದೂರಿನ ಅನ್ವಯ ದಿನಾಂಕ: 01.03.2021 ರಂದು ಜಿ.ಎಸ್.ಸಿ.ನಂ. ಪಿ.ಒ 1874210600085 ರಂತೆ ಪಿಟಿಷನ್ ದಾಖಲು ಮಾಡಿದ್ದು, ಅಕ್ರಮ ಪ್ರವೇಶವನ್ನು ತಡೆದಿರುತ್ತಾರೆ.
ದೂರು ದಾಖಲಿಸದ ಸಂಪಿಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಕ್ರಮ ಕೈಗೊಳ್ಳದ ಎಸಿಪಿ ಮುರುಗೇಂದ್ರಯ್ಯ: ದಿನಾಂಕ: 06.03.2025 ರಂದು ಸದರಿಯವರ ಜಮೀನಿಗೆ ಮೇಲ್ಕಂಡ ಭೂಗಳ್ಳರು ಅತಿ ಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿ. ಪ್ರಾಣಬೆದರಿಕೆ ಹಾಕಿದ್ದರ ಬಗ್ಗೆ ಅಂದೇ ಮುನಿಆಂಜಿನಪ್ಪನವರ ಕುಟುಂಬದವರು ಸಂಪಿಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್‌ರವರಿಗೆ ಮತ್ತು ಎಸಿಪಿ ಮುರುಗೇಂದ್ರಯ್ಯರವರಿಗೆ ದೂರು ಕೊಟ್ಟರೂ ಸಹ ದೂರನ್ನು ದಾಖಲಿಸಿರುವುದಿಲ್ಲ ಮತ್ತು ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಈ ವಿಚಾರವಾಗಿ ದಿನಾಂಕ: 16.04.2025 ರಂದು ಡಿಸಿಪಿ ನಾರ್ಥ್ - ಈಸ್ಟ್‌ರವರಿಗೆ ದಲಿತ ಕುಟುಂಬದವರು ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲ.
ರೌಡಿಗಳೊಂದಿಗೆ ಅಕ್ರಮ ಪ್ರವೇಶಕ್ಕೆ ಯತ್ನ: ದಿನಾಂಕ: 08.04.2025 ರಂದು ಮೇಲ್ಕಂಡ
ಆರೋಪಿಗಳು ಸುಮಾರು 60-70 ಜನ ರೌಡಿಗಳನ್ನು ಕರೆತಂದು ಜಮೀನಿಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದಾದ ಇದನ್ನು ತಡೆಯಲು ಮುಂದಾದ ಮರಿಯಪ್ಪ ಮತ್ತು ದೇವರಾಜುರವರನ್ನು ಕೊಲೆ ಮಾಡಿ ಈ ಭೂಮಿಯಲ್ಲಿ ಮುಚ್ಚುತ್ತೇವೆ ಎಂದು ಕೊಲೆಬೆದರಿಕೆ ಹಾಕಿ ಜಾತಿನಿಂಧನೆ ಮಾಡಿ ದೌರ್ಜನ್ಯ ನಡೆಸಿದ್ದು, ಪ್ರಾಣಬೆದರಿಕೆ ಹಾಕಿರುತ್ತಾರೆಂದು ತಿಳಿದುಬಂದಿರುತ್ತದೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ದಲಿತರ ಜಮೀನನ್ನು ಕಬಳಿಸಲು ಪ್ರಾಣಬೆದರಿಕೆ ಹಾಕಿರುವ ಬಗ್ಗೆ:
ಮುನಿಆಂಜಿನಪ್ಪ ಅವರ ಮಗ ಮರಿಯಪ್ಪ ಅವರನ್ನು ದಿನಾಂಕ: 23.04.2025 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಧರ್ ಎಂಬುವವರ ಮೂಲಕ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್‌ರವರು ತಮ್ಮ ಮನೆಗೆ ಕರೆಸಿಕೊಂಡು ಮರಿಯಪ್ಪನನ್ನು ಕುರಿತು "ಈ ಜಮೀನಿಗೆ ನಾನು ಬಂಡವಾಳ ಹಾಕಿದ್ದೇನೆ ಇದರ ವಿಷಯಕ್ಕೆ ನೀವು ಬಂದರೆ ನಿಮ್ಮ ಮೇಲೆ ಕೇಸು ಹಾಕಿಸಿ ಜೈಲಿಗೆ ಕಳುಹಿಸುತ್ತೇನೆ. ನೀವು ಮತ್ತು ನಿಮ್ಮ ಕುಟುಂಬದವರು ನಾನು ಕೊಡುವ ಹಣ ತೆಗೆದುಕೊಂಡು ಸದರಿ ಜಮೀನಿನ ಸ್ವಾಧೀನವನ್ನು ಬಿಟ್ಟುಕೊಟ್ಟು ಈಗಲೇ ಜಾಗ ಖಾಲಿ ಮಾಡಬೇಕು ಹಾಗೂ ನೀವು ಮತ್ತು ನಿಮ್ಮ ಕುಟುಂಬದವರು ಕೋರ್ಟಿನಲ್ಲಿ ಹಾಕಿರುವ ದಾವೆಗಳನ್ನು ವಾಪಸ್ಸು ಪಡೆಯಬೇಕು" ಎಂದು ಏರುಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆಂದು ನಮ್ಮ ರಾಜ್ಯಸಮಿತಿ ದೂರು ನೀಡಿರುತ್ತಾರೆ. ಇದೇ ದೂರನ್ನು ಕೊತ್ತನೂರು ಪೊಲೀಸ್ ಠಾಣೆಗೆ ಸಲ್ಲಿಸಲು ಹೋದಾಗ ಪೊಲೀಸರು ಸ್ವೀಕರಿಸಿರುವುದಿಲ್ಲ.
ದಾಸರಹಳ್ಳಿಯ ನಿವಾಸಿ ರೌಡಿ ದಾಸ ತಮ್ಮ ಅಕ್ರಮ ಗುಂಪಿನೊಂದಿಗೆ ಜಮೀನಿಗೆ ಅಕ್ರಮ ಪ್ರವೇಶ:
ರೌಡಿಶೀಟರ್ ದಾಸ ದಿನಾಂಕ: 08.05.2025 ರಂದು 30-40 ಜನ ಬಾಡಿಗೆ ಮಹಿಳೆಯರನ್ನು ಕರೆತಂದು ದಲಿತ ಕುಟುಂಬದವರಿಗೆ ಜಮೀನನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕಿ. ಇವರನ್ನು ಪೊಲೀಸರು ಮತ್ತು ರೌಡಿಗಳು ಒಟ್ಟಾಗಿ ಸೇರಿ ಜಮೀನಿನಿಂದ ಹೊರಹಾಕಲು ಪ್ರಯತ್ನಿಸುತ್ತಿರುತ್ತಾರೆ. ಅಲ್ಲದೆ ರಕ್ಷಣೆ ಕೊಡಬೇಕಾದ ಪೊಲೀಸ್ ಅಧಿಕಾರಿಗಳು ದಲಿತ ಕುಟುಂಬದವರ ಮೇಲೆಯೇ ಸುಳ್ಳು ದೂರು ದಾಖಲಿಸಿ, ಇವರುಗಳು ಜಮೀನಿನ ಹತ್ತಿರ ಬಂದರೆ ಅವರನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಲು ಹುನ್ನಾರ ಮಾಡುತ್ತಿರುತ್ತಾರೆಂದು ತಿಳಿದುಬಂದಿದೆ.
ಪ್ರಾಮಾಣಿಕ ಉನ್ನತ ಅಧಿಕಾರಿಗಳಿಂದ ತನಿಖೆಗೆ ಮನವಿ: ಪ್ರಭಾವಿ ಮಂತ್ರಿ ಬೈರತಿ ಸುರೇಶ್‌ರವರು ಈ ಭೂಕಬಳಿಕೆಗೆ ಯತ್ನಿಸಿರುವುದರಿಂದ, ದಲಿತರನ್ನು ಬಲಪ್ರಯೋಗದಿಂದ ಜಮೀನಿನಿಂದ ಹೊರಹಾಕುವ ಪ್ರಯತ್ನ ನಡೆಸಿರುವುದರಿಂದ ಮತ್ತು ಸಂಪಿಗೆಹಳ್ಳಿ ಪೊಲೀಸರು ಎಸಿಪಿರವರು ದಲಿತರಿಗೆ ರಕ್ಷಣೆ ಕೊಡಲು ವಿಫಲ ಆಗಿರುವ ಹಿನ್ನಲೆಯಲ್ಲಿ ಭೂಗಳ್ಳರಿಂದ ದಲಿತರ ಆಸ್ತಿಪಾಸ್ತಿಗೆ ಮತ್ತು ಪ್ರಾಣಕ್ಕೆ ಅಪಾಯ ಇರುವುದರಿಂದ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ, ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಂಡು ಸದರಿ ದಲಿತರ ಆಸ್ತಿ ಮತ್ತು ಪ್ರಾಣಕ್ಕೆ ರಕ್ಷಣೆ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ, ಪೊಲೀಸ್ ಆಯುಕ್ತರಿಗೆ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು (ಪೂರ್ವ ವಿಭಾಗ) ಇವರುಗಳಿಗೆ ಮನವಿ ನೀಡಿರುತ್ತೇವೆ.
ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಈ ಭೂ ಕಬಳಿಕೆಗೆ ಭೂಮಾಫಿಯಾಗಳು ಪೊಲೀಸರು ಮತ್ತು ಮಂತ್ರಿಗಳು ಶಾಮೀಲಾಗಿದ್ದು, ಮುನಿಆಂಜಿನಪ್ಪರವರ ಕುಟುಂಬದವರ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯ ಇರುವುದರಿಂದ ಇವರಿಗೆ ಸೂಕ್ತ ರಕ್ಷಣೆ ನೀಡಬೇಕು. ಅಲ್ಲದೆ ದಲಿತರ ಈ ಜಮೀನು ಕಬಳಿಕೆಗೆ ಮುಂದಾಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ರವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ.
Comments
Post a Comment