'ಮಾವು-ಹಲಸು ಮಾರಾಟ ಮೇಳ'ಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಪ್ಸ್) ವತಿಯಿಂದ 'ಮಾವು, ಹಲಸು, ಹುಣಸೆ ಹಣ್ಣು ಮಾರಾಟ ಮೇಳ'ಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು. 

ಹಾಪ್‌ಕಾಮ್ಸ್‌ನಲ್ಲಿ ಮಾರಾಟವಾಗುವ ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸಲಾಗುತ್ತದೆ.
ರಾಸಾಯನಿಕ ಮುಕ್ತ ಮಾವಿನ ಹಣ್ಣನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಹಾಪ್‌ಕಾಮ್ಸ್‌ನ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಮೇಳ ಆರಂಭವಾಗಿದೆ.


ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 'ರೈತರ ತೋಟಗಳಿಂದ ನೇರ ಖರೀದಿ ವ್ಯವಸ್ಥೆ, ರೈತರ ಫಸಲಿಗೆ ಉತ್ತಮ ಧಾರಣೆ ಒದಗಿಸಿಕೊಡುವುದು ಈ ಮೇಳದ ಉದ್ದೇಶವಾಗಿದೆ. ಆರೋಗ್ಯಕರ ಮಾವು, ಹಲಸು ಮತ್ತು ಹುಣಸೆ ಹಣ್ಣುಗಳನ್ನು ರಿಯಾಯಿತಿ ದರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಬೇಕು' ಎಂದು ಕರೆ ನೀಡಿದರು.

ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಹಾಪ್‌ಕಾಮ್ಸ್ ಆನ್‌ಲೈನ್ ಮಾರಾಟಕ್ಕೆ ಉತ್ತೇಜನ ನೀಡಬೇಕು. ವಸತಿ ಸಮುಚ್ಚಯಗಳಿಗೆ ಸಂಚಾರಿ ಮಾರಾಟ ವಾಹನಗಳ ಮೂಲಕ ತರಕಾರಿ-ಹಣ್ಣುಗಳನ್ನು ಪೂರೈಕೆ ಮಾಡಬೇಕು. ಇದಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಮೂಲಕ ವಿದ್ಯುತ್‌ ಚಾಲಿತ ವಾಹನಗಳನ್ನು ಖರೀದಿಸಿ ಹಾಪ್‌ಕಾಮ್ಸ್‌ಗೆ ನೀಡಲಾಗುವುದು' ಎಂದು ರಾಮಲಿಂಗಾರೆಡ್ಡಿ ಹೇಳಿದರು.

'ಮೇಳವು ಮೇ 21ರಿಂದ 31ರವರೆಗೆ ನಡೆಯಲಿದ್ದು, ಹಲವು ತಳಿಯ ಮಾವಿನ ಮತ್ತು ಹಲಸಿನ ಹಣ್ಣುಗಳನ್ನು ಶೇಕಡ 5 ರಿಂದ 10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ' ಎಂದು ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್‌. ಗೋಪಾಲಕೃಷ್ಣ ಮಾಹಿತಿ ನೀಡಿದರು.

'ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಪ್ರಮುಖವಾಗಿ ಬಾದಾಮಿ, ಸಿಂಧೂರ, ನೀಲಂ, ತೋತಾಪುರಿ, ಮಲ್ಲಿಕಾ, ರಸಪೂರಿ ತಳಿಗಳನ್ನು ಬೆಳೆಯಲಾಗುತ್ತದೆ. ಹಲಸು ಕೂಡ ಒಂದು ಪ್ರಮುಖ ತೋಟಗಾರಿಕೆ ಬೆಳೆಯಾಗಿದ್ದು, ತುಮಕೂರು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಹಲಸಿನ ಹಣ್ಣಿನ ಬೆಳೆಯಿದೆ' ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಉದಯ್ ಬಿ. ಗರುಡಾಚಾರ್ ಉಪಸ್ಥಿತರಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium