ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ (AILU) ಆಗ್ರಹ
ಬೆಂಗಳೂರು, ಜೂನ್ 20, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಭಾರತ ವಕೀಲರ ಒಕ್ಕೂಟ'ದ ಸದಸ್ಯರ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಹರೀಂದ್ರ ಅವರು ಮಾತನಾಡಿದರು.
ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ (AILU) ಆಗ್ರಹ
ಭಾರತ ಸಂವಿಧಾನ ಪೀಠಿಕೆಯಲ್ಲಿನ ಅಂಶಗಳಾದ ಪ್ರಜಾಪ್ರಭುತ್ವ, ಜಾತ್ಯಾತೀತತೆ, ನ್ಯಾಯ, ಸಮಾಜವಾದದ ಉದ್ದೇಶಗಳ ಅಡಿಯಲ್ಲಿ ಅಖಿಲ ಭಾರತ ವಕೀಲರಒಕ್ಕೂಟ (AILU) 1982ರಲ್ಲಿ ಸ್ಥಾಪನೆಯಾಗಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ರಕ್ಷಿಸಲು ಹೋರಾಡುತ್ತಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸನ್ಮಾನ್ಯ ದಿ|| ವಿ.ಆರ್.ಕೃಷ್ಣ ಆಯ್ಕರ್. ಗೌರವಾನ್ವಿತ ನ್ಯಾಯಾಮೂರ್ತಿಗಳಾದ ಸನ್ಮಾನ್ಯ ದಿ|ಹೆಚ್.ಆರ್.ಖನ್ನಾ, ಗೌರವಾನ್ವಿತ ನ್ಯಾಯಮೂರ್ತಿಗಳಾದ ಸನ್ಮಾನ್ಯ ದಿ॥ ಎ.ಸಿ. ಗುಪ್ತಾ, ಬ್ಯಾರಿಸ್ಟರ್ ಹಾಗೂ ಹಿರಿಯ ವಕೀಲರಾದ ಶ್ರೀ ಡ್ಯಾನಿಶ್ ಅಲಿ ಲಲೇಫ್ ಹಾಗೂ ಕರ್ನಾಟಕದವರೇ ಆದ ಭಾರತದ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಮೂರ್ತಿಗಳಾದ ಸನ್ಮಾನ್ಯ ಶ್ರೀ ಎ. ಗೋಪಾಲಗೌಡ ಮತ್ತು ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಹೆಚ್.ಎನ್. ನಾಗಮೋಹನ್‌ದಾಸ್, ದಿ ಬ್ಯಾರಿಸ್ಟರ್ ಹೆಚ್ ಕೆ ವಾಸುದೇವರೆಡ್ಡಿ ದೇಶದ ಮತ್ತು ರಾಜ್ಯದ ಇತರ ಹಿರಿಯ ವಕೀಲರ ಮುಂದಾಳತ್ವದಲ್ಲಿ AILU ಸಂಘಟನೆಯು ವಕೀಲರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುತ್ತಿದೆ ಮತ್ತು ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುತ್ತಾ ಹಾಗೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ಹಲವಾರು ಕಾರ್ಯಕ್ರಮಗಳ ಮೂಲಕ ವಕೀಲರ ನಡುವೆ ಕಾರ್ಯನಿರ್ವಹಿಸುತ್ತಾ ಬಂದಿರುವ ವಕೀಲರ ಸಂಘಟನೆಯಾಗಿದೆ. ಅಲ್ಲದೇ ಈ ದೇಶದ ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಲು ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.
ಪ್ರಸ್ತುತ ನಮ್ಮ ರಾಜ್ಯದಲ್ಲಿ ನ್ಯಾಯ ಕೇಳಿ ಜನಸಾಮಾನ್ಯರು ನ್ಯಾಯಾಲಯಗಳಿಗೆ ಬರುತ್ತಿರುವುದು ಹೆಚ್ಚಾಗಿದೆ. ನ್ಯಾಯದಾನ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ಹಾಗೂ ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ರಾಜ್ಯದ ನ್ಯಾಯಾಲಯಗಳಲ್ಲಿ ವಿಲೇವಾರಿಗಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಸಾಕಷ್ಟಿದೆ. ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗುತ್ತಿದೆ. ರಾಜ್ಯದ ನ್ಯಾಯಾಲಯಗಳು ಮೂಲ ಸೌಕಯ್ಯಗಳ ಕೊರತೆ ಎದುರಿಸುತ್ತಿವೆ. ನ್ಯಾಯಾಂಗ ಇಲಾಖೆ ಸೇರಿದಂತೆ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಅಗತ್ಯವಿರುವ ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರವನ್ನು AILU ಆಗ್ರಹಿಸುತ್ತದೆ.
ರಾಜ್ಯದ ನ್ಯಾಯಾಲಯಗಳಲ್ಲಿ ನ್ಯಾಯ ನಿರೀಕ್ಷೆಯಲ್ಲಿರುವ ಕಕ್ಷಿದಾರರಿಗೆ ನ್ಯಾಯಕೊಡಿಸಲು ಶ್ರಮಿಸುತ್ತಿರುವ ವಕೀಲರು ಈ ಪ್ರಕ್ರಿಯೆಯಲ್ಲಿ ಹಲವು ಅಡೆತಡೆಗಳನ್ನು ಹಾಗೂ ಬೆದರಿಕೆಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಲ್ಲಿ ವಕೀಲರ ಮೇಲೆ ಹಲ್ಲೆ ಹಾಗೂ ವಕೀಲರ ಕೊಲೆ ನಡೆದಿರುವುದು ವರದಿಯಾಗಿವೆ. ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ವಕೀಲರಿಗೆ ಸೂಕ್ತ ರಕ್ಷಣೆ ಅಗತ್ಯವಿದೆ. ಅಲ್ಲದೇ ಕಾನೂನು ವಿದ್ಯಾರ್ಥಿಗಳು ಹಾಗೂ ಯುವ-ಕಿರಿಯ ವಕೀಲರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸುವಂತೆ AILU ಒತ್ತಾಯಿಸುತ್ತದೆ.
ಈ ಹಿನ್ನೆಲೆಯಲ್ಲಿ AILU ಕರ್ನಾಟಕರಾಜ್ಯ ಸಮಿತಿಯು ನಮ್ಮರಾಜ್ಯದಲ್ಲಿ ವಕೀಲರ ಮತ್ತು ಕಾನೂನು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿ ಜೂನ್ 13, 2025 ರಂದು ರಾಜ್ಯದ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ವಕೀಲರ ಬೇಡಿಕೆಗಳಿಗಾಗಿ ವಕೀಲರ ಸಹಿ ಸಂಗ್ರಹಿಸಲು ಹಾಗೂ ಸರ್ಕಾರಕ್ಕೆ ಮನವಿ ನೀಡಲು ಕರೆ ನೀಡಿತ್ತು. ಅದರಂತೆ ರಾಜ್ಯಾದ್ಯಂತ ವಕೀಲರು ಅಖಿಲ ಭಾರತ ವಕೀಲರ ಒಕ್ಕೂಟ (ಎ.ಐ.ಎಲ್.ಯು) ನೇತೃತ್ವದಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ AILU ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.
ಬೇಡಿಕೆಗಳು
1. ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು ಮತ್ತು ವಕೀಲರ ಸಂರಕ್ಷಣೆ ಕಾಯ್ದೆ-2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು.
2. ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ಮಾಸಿಕ ರೂ.10,000/- ಸೈಫಂಡ್ (ಸಹಾಯಧನ ನೀಡಬೇಕು.
3. ರಾಜ್ಯದ ಎಲ್ಲಾ ತಾಲ್ಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ರೂ. 5 ಲಕ್ಷ ಅನುದಾನ ಮಂಜೂರು ಮಾಡಬೇಕು ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ರೂ. 10 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಬೇಕು.
4. ರಾಜ್ಯ ಸರ್ಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ಒದಗಿಸಬೇಕು.
5. ರಾಜ್ಯದ ಪ್ರತಿಜಿಲ್ಲೆಗೆ ಒಂದರಂತೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು ಹಾಗೂ ಈಗಿರುವ ಅನುದಾನಿತ & ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರ್ಕಾರ ನಿಯಂತ್ರಣ ಮಾಡಬೇಕು. ಹಾಲಿ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
6. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿಗಳನ್ನು ಸ್ಥಾಪಿಸಬೇಕು.
7. ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಬೇಕು. ಹಾಗೆಯೇ ಈಗಿರುವ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
8. ರಾಜ್ಯದಲ್ಲಿನ ಎಲ್ಲ ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ಚೇಂಬರ್‌ಗಳನ್ನು ಸ್ಥಾಪಿಸಬೇಕು.
9. ರೆವೆನ್ಯೂ, AC, DC ನ್ಯಾಯಾಲಯಗಳಲ್ಲಿ ನಡೆಯುವ ಕಂದಾಯ ಪ್ರಕರಣಗಳಲ್ಲಿ ಬೇರೆ ಬೇರೆ ರೀತಿಯ ಒತ್ತಡಗಳು ಮತ್ತು ವಿಳಂಬದ ಕಾರಣ ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಯದೆ ಸಕ್ರಮವಾದ ತೀರ್ಪುಗಳು ಆಗದೆ ಇರುವದರಿಂದ ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು.
10. ಅಖಿಲ ಭಾರತ ಬಾರ್ ಪರೀಕ್ಷೆ (AIBE) ರದ್ದುಪಡಿಸಬೇಕು.
11. ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು.
12. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಛೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು. 13. ವಕೀಲರ ಸಂಘದ/ ಪರಿಷತ್ತಿನ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕು. ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿಧ್ಯ ನೀಡಬೇಕು.
ಮೇಲೆ ತಿಳಿಸಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಭಾರತ ವಕೀಲರ ಒಕ್ಕೂಟ (AILU) ಕರ್ನಾಟಕ ರಾಜ್ಯ ಸಮಿತಿ ಹಾಗೂ ಬೆಂಗಳೂರು ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.
Comments
Post a Comment