ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ಗಮನಿಸಿದ ನದಿ ನೀರು ಕಲುಷಿತಕ್ಕೆ ಕಾರಣಗಳು ಮತ್ತು ಪರಿಹಾರ ಸಾದ್ಯತೆಯ ಸಮೀಕ್ಷೆಯ ವರದಿಯನ್ನು ಬಿಡುಗಡೆಗೊಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಪರ್ಯಾವರಣ ಟ್ರಸ್ಟ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ಗಮನಿಸಿದ ನದಿ ನೀರು ಕಲುಷಿತಕ್ಕೆ ಕಾರಣಗಳು ಮತ್ತು ಪರಿಹಾರ ಸಾದ್ಯತೆಯ ಸಮೀಕ್ಷೆಯ ವರದಿಯನ್ನು ಬಿಡುಗಡೆಗೊಳಿಸಿದರು. 

ಶ್ರೀ ಕ್ಷೇತ್ರ ಶೃಂಗೇರಿ ಬಳಿ ವರಾಹ ಪರ್ವತದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿ ಬಳಿ ಸಂಗಮವಾಗಿ ಮುಂದೆ ಸಾಗುತ್ತಾ ತುಂಗಭದ್ರಾ ಡ್ಯಾಂ ಸೇರಿ ಅಲ್ಲಿಂದ ಆಂದ್ರದ ಕೃಷ್ಣಾ ನದಿ ಸೇರುತ್ತದೆ. ಕರ್ನಾಟಕದ ಅತ್ಯಂತ ಉದ್ದವಾದ ನದಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಈ ನದಿ ತನ್ನ ಅಕ್ಕಪಕ್ಕದ ಊರುಗಳಿಗೆ ಕುಡಿಯುವ ನೀರಿನ ಮೂಲವಾಗಿ ಮತ್ತು ಲಕ್ಷಾಂತರ ರೈತರಿಗೆ ಜೀವ ನದಿಯಾಗಿಯೂ ಹೆಸರು ಗಳಿಸಿದೆ.

ಆದರೆ ಜನಸಂಖ್ಯೆ ಹೆಚ್ಚಳ,ನಗರೀಕರಣದ ಜೊತೆಗೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ನದಿ ನೀರು ಕಲುಷಿತವಾಗುತ್ತಾ ಬಂದಿತು. ಇತ್ತೀಚಿನ ವರ್ಷಗಳಲ್ಲಿ ಇದು ಅತಿಹೆಚ್ಚು ಕಲುಷಿತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಮನಗಂಡ ಶಿವಮೊಗ್ಗ ನಗರದ ಪರಿಸರ ಕಾಳಜಿಯ ಪರ್ಯಾವರಣ ಟ್ರಸ್ಟ್ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ದ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಪ್ರಥಮಬಾರಿಗೆ ನದಿಯೊಂದರ ಪಾವಿತ್ರ್ಯತೆ ಕಾಪಾಡುವ ಕರೆಯೊಂದಿಗೆ ಕಳೆದ ನವೆಂಬರ್, ಡಿಸೆಂಬರ್ ನಲ್ಲಿ ಶೃಂಗೇರಿಯಿಂದ ಗಂಗಾವತಿ ಬಳಿ ಕಿಷ್ಕಂಧೆ ತನಕ ಬೃಹತ್ ಜಲಜಾಗೃತಿ -ಜನಜಾಗೃತಿ ಪಾದಯಾತ್ರೆ ಆಯೋಜಿಸಿತ್ತು.

ನದಿ ಪಾತ್ರದ 7 ಜಿಲ್ಲೆಗಳು, 13 ತಾಲ್ಲೂಕುಗಳು ಹಾಗೂ ಸುಮಾರು 120ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಎರಡು ಹಂತಗಳಲ್ಲಿ ಸಾಗಿದ ಪಾದಯಾತ್ರೆ ಒಟ್ಟು 22 ದಿನಗಳಲ್ಲಿ ಸುಮಾರು 430 ಕಿ.ಮೀ ದೂರ ತಲುಪಿ ಜಲ ಸಂರಕ್ಷಣೆ ಕಾರ್ಯದಲ್ಲಿ ದಾಖಲೆಯನ್ನು ಬರೆದಿದೆ. ಪಾದಯಾತ್ರೆಯಲ್ಲಿ ಸುಮಾರು 35 ಸಣ್ಣ ಹಾಗೂ 15 ದೊಡ್ಡ ಒಟ್ಟು 50ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಜನರಲ್ಲಿ ಜಲ ಜಾಗೃತಿ ಉಂಟು ಮಾಡುವ ಕಾರ್ಯದ ಜೊತೆಗೆ ನದಿ ಸಂರಕ್ಷಣೆ ಕಾರ್ಯದ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಾದಯಾತ್ರೆಯಲ್ಲಿ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಅರ್ಧ ಲಕ್ಷ ಜನರು ಭಾಗವಹಿಸಿರುವುದು ತುಂಗಭದ್ರಾ ನದಿಯನ್ನು ನಿರ್ಮಲಗೊಳಿಸುವ ತುರ್ತು ಅಗತ್ಯ ಎನ್ನುವ ಕೂಗಿಗೆ ಬಲ ತಂದುಕೊಟ್ಟಿದೆ. ಸುಮಾರು 150ಕ್ಕೂ ಹೆಚ್ಚು ಶಾಲಾ ಕಾಲೇಜುಗಳು, 250 ಪರಿಸರ ಕಾಳಜಿಯ ಸಂಘ ಸಂಸ್ಥೆಗಳು, 30 ಧಾರ್ಮಿಕ ಮಠ ಮಂದಿರಗಳು, ರೈತರು, ಸಾಧು ಸಂತರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ನೀಡಿ ಪಾದಯಾತ್ರೆಯಲ್ಲಿ ಭಾಗವಹಿಸಿ ಅಭಿಯಾನದ ಉದ್ದೇಶವನ್ನು ಯಶಸ್ವಿಗೊಳಿಸಲು ಕಾರಣಕರ್ತರಾಗಿದ್ದಾರೆ.

ಈ ಪಾದಯಾತ್ರೆಯ ಸಂದರ್ಭದಲ್ಲಿ ತಂಡದ ತಾಂತ್ರಿಕ ವಿಭಾಗ ಸದಸ್ಯರು ಪರಿಸರ ತಜ್ಞರ ಮಾರ್ಗದರ್ಶನದಲ್ಲಿ ನದಿ ಕಲುಷಿತವಾಗಲು ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟಲು ಸಾಧ್ಯವಾಗುವ ಪರಿಹಾರಗಳನ್ನು ಸ್ಥಳೀಯರೊಂದಿಗೆ ಚರ್ಚಿಸಿ ಪಟ್ಟಿ ಮಾಡಿದೆ. ಈ ವರದಿಯನ್ನು ಈಗ ಪುಸ್ತಕ ರೂಪದಲ್ಲಿ ಪರ್ಯಾವರಣ ಟ್ರಸ್ಟ್ ಬಿಡುಗಡೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆಗೆ ಚರ್ಚಿಸಿ ಲಕ್ಷಾಂತರ ಜನರ ಹಾಗೂ ಜೀವಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ಹೊಂದಿರುತ್ತದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium