ಸಿದ್ದರಾಮಯ್ಯ ಡಿಕೆಶಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡುವುದು ರಾಜಧರ್ಮ: ರಾಜ್ಯ ಒಕ್ಕಲಿಗರ ಒಕ್ಕೂಟ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡುವರೆ ವರ್ಷದ ಒಪ್ಪಂದದಂತೆ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವುದು ಉತ್ತಮ ರಾಜಕೀಯ ನಡೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ.ದೇವರಾಜ್ ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ 2023 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿತು. ಅಂದು ನಡೆದ ಒಪ್ಪಂದದದಂತೆ ಮುಖ್ಯಮಂತ್ರಿ ಹುದ್ದೆಗೆ ತಲಾ ಎರಡುವರೆ ವರ್ಷ ಕಾಲಾವಧಿ ನಿಗದಿಪಡಿಸಲಾಗಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡುವರೆ ವರ್ಷಗಳ ಕಾಲಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಒಪ್ಪಂದ ಪ್ರಕಾರ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುವುದು ರಾಜಧರ್ಮವಾಗಿದೆ ಎಂದು ಸಿ.ವಿ.ದೇವರಾಜ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಕ್ಷ ನಿಷ್ಠೆ ಯಾರು ಪ್ರಶ್ನೆ ಮಾಡುವಂತಿಲ್ಲ. ಅವರನ್ನು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೆ ಕರೆಯಲಾಗುತ್ತದೆ.
ಅವರ ಪಕ್ಷ ನಿಷ್ಠೆ, ತ್ಯಾಗ, ಬಲಿದಾನ ಪರಿಗಣಿಸಿ ಮುಖ್ಯಮಂತ್ರಿ ಹುದ್ದೆ ಕೊಡುವುದು ರಾಜಕೀಯ ನ್ಯಾಯವಾಗಿದೆ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ದೇವರಾಜ್ ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಗಳಿಗೆಯಲ್ಲಿ ಶಾಸಕಾಂಗ ಪಕ್ಷ ಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಒತ್ತಾಯಿಸುವುದು ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಈ ಹಿಂದೆ ಗುಂಡೂರಾವ್, ಬಂಗಾರಪ್ಪ, ವೀರಪ್ಪಮೊಯಿಲಿ ಯವರು ಮುಖ್ಯಮಂತ್ರಿಯಾಗಲು ಹೈಕಮಾಂಡ್ ನಿರ್ದೇಶನವೆ ಸಾಕಾಗಿತು. ಈಗಲೂ ಹೈಕಮಾಂಡ್ ತನ್ನ ಪ್ರಭಾವ ಬಳಸಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿ.ವಿ.ದೇವರಾಜ್ ಹೇಳಿದ್ದಾರೆ.
ಆದರಿಂದ ಯಾವುದೇ ನೆಪ ಹೇಳದೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಉತ್ತಮ ರಾಜಕೀಯ ನಡೆಗೆ ಸಿದ್ದರಾಮಯ್ಯ ಮಾದರಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.
Comments
Post a Comment