ಗೆಲ್ಲುವ ಹಾದಿ 'ಶೂನ್ಯ'ದಿಂದ ಆರಂಭವಾಗುತ್ತದೆ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಅಪೋಲೋ ಕ್ಯಾನ್ಸರ್ ಸೆಂಟರ್ ನಿಂದ 'ಜೀರೋ ಟು ಹೀರೋ' ಅಭಿಯಾನಕ್ಕೆ ಚಾಲನೆ





ಬೆಂಗಳೂರು, 04 ಫೆಬ್ರವರಿ 2026: 'ವಿಶ್ವ ಕ್ಯಾನ್ಸರ್ ದಿನ'ದ (ಫೆಬ್ರವರಿ 4, 2026) ಅಂಗವಾಗಿ ಅಪೋಲೋ ಕ್ಯಾನ್ಸರ್ ಸೆಂಟರ್ ತನ್ನ ಹೊಸ ‘ಜೀರೋ ಟು ಹೀರೋ’ ಅಭಿಯಾನವನ್ನು ಪ್ರಾರಂಭಿಸಿದೆ. ಕ್ಯಾನ್ಸರ್ ಅನ್ನು 'ಶೂನ್ಯ ಹಂತ'ದಲ್ಲೇ ಪತ್ತೆಹಚ್ಚುವ ಮೂಲಕ, ರೋಗಿಗಳು ಗುಣಮುಖರಾಗುವ ಸಾಧ್ಯತೆಗಳನ್ನು ಹೆಚ್ಚಿಸುವ ಮತ್ತು ಉತ್ತಮ ಜೀವನ ಲಭಿಸುವಂತೆ ಮಾಡುವ ಉದ್ದೇಶ ಸಾಕಾರಕ್ಕಾಗಿ ಈ ಅಭಿಯಾನವನ್ನು ಆರಂಭಿಸಲಾಗಿದೆ.

ಸಂಸತ್ತಿನಲ್ಲಿ ಮಂಡಿಸಲಾದ ಐಸಿಎಂಆರ್- ಎನ್ ಸಿ ಆರ್ ಪಿ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ತೀವ್ರವಾಗಿ ಏರುತ್ತಿವೆ. 2024ರಲ್ಲಿ 15 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಪ್ರತಿ ಒಂಬತ್ತು ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿದ್ದು, ಇದು ಸಾರ್ವಜನಿಕ ಆರೋಗ್ಯದ ಗಂಭೀರ ಕಳವಳವಾಗಿ ಹೊರಹೊಮ್ಮಿದೆ. ಆದರೂ, ಶೇ. 70ಕ್ಕಿಂತ ಹೆಚ್ಚು ಪ್ರಕರಣಗಳು ತಡವಾದ ಹಂತಗಳಲ್ಲಿ (ಹಂತ III/ IV) ಮಾತ್ರ ಪತ್ತೆಯಾಗುತ್ತಿವೆ. ಈ ಹಂತದಲ್ಲಿ ಚಿಕಿತ್ಸೆ ಕಠಿಣವಾಗಿರುತ್ತದೆ, ಗುಣಮುಖರಾಗುವ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ಹೆಚ್ಚಿರುತ್ತದೆ.

ಈ ಆತಂಕಕಾರಿ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ, ಅಪೋಲೋ ಕ್ಯಾನ್ಸರ್ ಸೆಂಟರ್ ನ(ಎಸಿಸಿ) 'ಜೀರೋ ಟು ಹೀರೋ' ಅಭಿಯಾನವು 'ಶೂನ್ಯ ಹಂತ'ದಲ್ಲಿ ಕ್ಯಾನ್ಸರ್ ಪತ್ತೆ ಮತ್ತು ಆರಂಭಿಕ ಚಿಕಿತ್ಸೆಯ ಅತ್ಯುತ್ತಮ ಪರಿಣಾಮವನ್ನು ಎತ್ತಿ ತೋರಿಸಲಿದ್ದು, ಇದು ಕಾಯಿಲೆಯ ಆರಂಭಿಕ ಹಂತದ ರೋಗನಿರ್ಣಯವನ್ನು ಒಂದು ಗೆಲುವಿನ ಕಥೆಯಾಗಿ ಬದಲಿಸಬಹುದು ಎಂದು ಸಾರುತ್ತದೆ. ಈ ಯೋಜನೆಯು ಸಮಯೋಚಿತವಾಗಿ ಕಾರ್ಯಪ್ರವೃತ್ತರಾಗಿ, ಜಾಗೃತಿ ಮತ್ತು ತ್ವರಿತ ಚಿಕಿತ್ಸೆಯ ಮೂಲಕ 'ಹೀರೋ'ಗಳಾಗಿ ಹೊರಹೊಮ್ಮಿದ ವ್ಯಕ್ತಿಗಳನ್ನು ಗೌರವಿಸುತ್ತದೆ. ಪ್ರತಿಯೊಂದು ಕ್ಯಾನ್ಸರ್ (ಮೆದುಳು, ಸ್ತನ, ಕುತ್ತಿಗೆ, ಶ್ವಾಸಕೋಶ, ಮೇದೋಜ್ಜೀರಕ ಗ್ರಂಥಿ, ಯಕೃತ್ತು ಇತ್ಯಾದಿ) ವಿಭಿನ್ನವಾಗಿದ್ದರೂ, ಈ ಎಲ್ಲಾ ಗೆದ್ದ ಸಾಧಕರು 'ಆರಂಭಿಕ ರೋಗನಿರ್ಣಯ'ದ ಕಾರಣದಿಂದ ಗೆಲುವಿನ ತಂಡ ಸೇರಿಕೊಂಡಿದ್ದಾರೆ. ಇವರ ಯಶಸ್ಸಿನ ಪ್ರಯಾಣವು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ ಮತ್ತು ಆರಂಭಿಕ ರೋಗನಿರ್ಣಯ ಜೀವಗಳನ್ನು ಉಳಿಸಬಲ್ಲದು ಎಂದು ಸಾರುತ್ತದೆ.

*ಅಪೋಲೋ ಹಾಸ್ಪಿಟಲ್ಸ್ ಎಂಟರ್ ಪ್ರೈಸಸ್ ಲಿಮಿಟೆಡ್ ನ ಗ್ರೂಪ್ ಆಂಕಾಲಜಿ ಮತ್ತು ಇಂಟರ್ ನ್ಯಾಷನಲ್ ವಿಭಾಗದ ಅಧ್ಯಕ್ಷರಾದ ದಿನೇಶ್ ಮಾಧವನ್ ಅವರು* ಮಾತನಾಡಿ, "ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವುದು ಕೇವಲ ವೈದ್ಯಕೀಯ ಆದ್ಯತೆ ಮಾತ್ರವಲ್ಲ, ಅದು ವ್ಯವಸ್ಥೆಯ ಆದ್ಯತೆಯೂ ಹೌದು. ಅಂಕಿ ಅಂಶಗಳ ಪ್ರಕಾರ, ತಡವಾದ ಹಂತದಲ್ಲಿ ಪತ್ತೆಯಾಗುವ ಕ್ಯಾನ್ಸರ್ ಗೆ ಹೋಲಿಸಿದರೆ, ಆರಂಭಿಕ ಹಂತದಲ್ಲಿ ಪತ್ತೆಯಾದ ಕ್ಯಾನ್ಸರ್ ನಲ್ಲಿ ರೋಗಿಗಳು ಸುದೀರ್ಘ ಕಾಲ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಅಪೋಲೋ ಕ್ಯಾನ್ಸರ್ ಸೆಂಟರ್ ನಲ್ಲಿ ನಾವು ಕೇವಲ ಚಿಕಿತ್ಸೆ ನೀಡುವುದಲ್ಲದೆ, ತಡೆಗಟ್ಟುವಿಕೆ ಮತ್ತು ಮುಂಚಿತವಾಗಿ ರೋಗ ಪತ್ತೆಹಚ್ಚುವ ಕಡೆಗೆ ಸದಾ ಗಮನ ಹರಿಸುತ್ತೇವೆ. ಇಂತಹ ಪ್ರಕರಣಗಳನ್ನು ಮೊದಲೇ ಗುರುತಿಸುವುದರಿಂದ ನಮ್ಮ ಕ್ಯಾನ್ಸರ್ ಅಂಕಿಅಂಶಗಳ ದಾಖಲೆ ಬಲಗೊಳ್ಳುತ್ತದೆ, ಚಿಕಿತ್ಸೆಯ ಹಾದಿ ವೇಗವಾಗುತ್ತದೆ ಮತ್ತು ಹೆಚ್ಚಿನ ರೋಗಿಗಳು ಕ್ಯಾನ್ಸರ್ ಗೆದ್ದು ಬರುವಂತೆ ಮಾಡಲು ಸಹಕಾರಿಯಾಗುತ್ತದೆ. ಈ ವಿಧಾನವು ಕ್ಯಾನ್ಸರ್ ಆರೈಕೆಯನ್ನು ಕೇವಲ ಪ್ರತಿಕ್ರಿಯಾತ್ಮಕ ಚಿಕಿತ್ಸೆಯಿಂದ ಸಕ್ರಿಯ ನಿಯಂತ್ರಣದತ್ತ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ" ಎಂದು ತಿಳಿಸಿದರು.

*ಅಪೋಲೋ ಹಾಸ್ಪಿಟಲ್ಸ್ ನ ಕರ್ನಾಟಕ ವಲಯದ ಸಿಇಓ ಶ್ರೀ ಅಕ್ಷಯ್ ಓಲೆಟಿ ಅವರು ಮಾತನಾಡಿ* , "ಅಪೋಲೋ ಕ್ಯಾನ್ಸರ್ ಸೆಂಟರ್ ನಲ್ಲಿ ನಾವು ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುವಂತೆ ಸಬಲೀಕರಿಸಲು ಬದ್ಧರಾಗಿದ್ದೇವೆ. ಈ 'ಜೀರೋ ಟು ಹೀರೋ' ಅಭಿಯಾನವು ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ನಮಗಿರುವ ಬದ್ಧತೆಗೆ ಸಾಕ್ಷಿಯಾಗಿದೆ. ಈ ಪರಿವರ್ತನಾ ಚಳವಳಿಯ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ. ಪ್ರತಿಯೊಬ್ಬರೂ ಜಾಗೃತಿ, ತಪಾಸಣೆ ಮತ್ತು ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ಆರಂಭಿಕ ಹಂತದ ಕ್ಯಾನ್ಸರ್ ರೋಗನಿರ್ಣಯವನ್ನು ಬದುಕುಳಿಯುವ ಮತ್ತು ಭರವಸೆಯ ಕಥೆಯನ್ನಾಗಿ ಬದಲಾಯಿಸೋಣ" ಎಂದು ಹೇಳಿದರು.

*ಬೆಂಗಳೂರಿನ ಅಪೋಲೋ ಕ್ಯಾನ್ಸರ್ ಸೆಂಟರ್ನ ತಜ್ಞ ವೈದ್ಯರು ಮಾತನಾಡಿ*, "ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವುದು ಎಷ್ಟು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂಬುದನ್ನು ನಾವು ಪ್ರತಿದಿನ ನೋಡುತ್ತೇವೆ. ಅತ್ಯಂತ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದಾಗ, ಚಿಕಿತ್ಸೆಯು ಕಡಿಮೆ ನೋವಿನಿಂದ ಕೂಡಿದ್ದು, ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಬದುಕುಳಿಯುವ ಪ್ರಮಾಣವು ಗಣನೀಯವಾಗಿ ಹೆಚ್ಚಿರುತ್ತದೆ. ಆಧುನಿಕ ಇಮೇಜಿಂಗ್ ತಂತ್ರಜ್ಞಾನವು ನಾವು ಕ್ಯಾನ್ಸರ್ ಪತ್ತೆಹಚ್ಚುವ ವಿಧಾನವನ್ನೇ ಬದಲಿಸಿದೆ. 'ಶೂನ್ಯ ಹಂತ' ಅಥವಾ 'ಹಂತ 1' ರಲ್ಲಿ, ನಾವು ಗೆಡ್ಡೆಗೆ ಹೆಚ್ಚು ಕೇಂದ್ರೀಕೃತ ಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಬಹುದು. ಇದರಿಂದ ದೊಡ್ಡ ಶಸ್ತ್ರಚಿಕಿತ್ಸೆ ಅಥವಾ ಕೀಮೋಥೆರಪಿಯ ಅಗತ್ಯವನ್ನು ಕಡಿಮೆ ಮಾಡಬಹುದು ಮತ್ತು ದೀರ್ಘಕಾಲೀನ ಆರೋಗ್ಯವನ್ನು ಪಡೆಯಬಹುದು. ಇಲ್ಲಿ ರೋಗಿಯೇ ನಿಜವಾದ ಹೀರೋ. ವ್ಯಕ್ತಿಗಳು ಜಾಗೃತಿಗೆ ಆದ್ಯತೆ ನೀಡಿ, ನಿಯಮಿತ ತಪಾಸಣೆಗೆ ಒಳಪಟ್ಟಾಗ ಮತ್ತು ಆರಂಭಿಕ ಲಕ್ಷಣಗಳು ಕಂಡ ತಕ್ಷಣ ಚಿಕಿತ್ಸೆ ಪಡೆದಾಗ, ಅವರು ಕ್ಯಾನ್ಸರ್ ಸೋಲಿಸಲು ತಮಗೆ ತಾವೇ ಉತ್ತಮ ಅವಕಾಶವನ್ನು ನೀಡಿಕೊಂಡಂತಾಗುತ್ತದೆ. ಆರಂಭಿಕ ಚಿಕಿತ್ಸೆಯು ಬದುಕುಳಿಯುವಿಕೆಯನ್ನು ಸುಧಾರಿಸುವುದಲ್ಲದೆ ಜೀವನದ ಗುಣಮಟ್ಟವನ್ನೂ ಕಾಪಾಡುತ್ತದೆ. ಅದಕ್ಕಾಗಿಯೇ ಜಾಗೃತಿ, ನಿಯಮಿತ ತಪಾಸಣೆ ಮತ್ತು ತ್ವರಿತ ಚಿಕಿತ್ಸೆ ಬಹಳ ಮುಖ್ಯ. ಏಕೆಂದರೆ ನಾವು ಎಷ್ಟು ಬೇಗ ಕಾರ್ಯಪ್ರವೃತ್ತರಾಗುತ್ತೇವೆಯೋ, ಅಷ್ಟು ಉತ್ತಮ ಫಲಿತಾಂಶ ಸಿಗುತ್ತದೆ" ಎಂದು ತಿಳಿಸಿದರು.

*ಅಪೋಲೋ ಕ್ಯಾನ್ಸರ್ ಸೆಂಟರ್ ನಲ್ಲಿ ಕ್ಯಾನ್ಸರ್ ಗೆದ್ದವರು ಒಬ್ಬರು ಹೆಮ್ಮೆಯಿಂದ ಮಾತನಾಡಿ*, "ನನಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ಅದನ್ನು ಕೇಳುವುದೇ ಭಯಾನಕವಾಗಿತ್ತು. ಆದರೆ ಅದನ್ನು ಮೊದಲೇ ಪತ್ತೆಹಚ್ಚಿದ್ದು ನನ್ನ ಬದುಕನ್ನೇ ಬದಲಿಸಿತು. ನನ್ನ ಚಿಕಿತ್ಸೆ ಸುಲಭವಾಗಿತ್ತು, ಚೇತರಿಕೆ ವೇಗವಾಗಿತ್ತು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನನ್ನ ಜೀವನವು ಎಲ್ಲೂ ಸ್ಥಗಿತಗೊಂಡಂತೆ ನನಗೆ ಅನಿಸಲೇ ಇಲ್ಲ. ಇಂದು ನಾನು ಹಿಂತಿರುಗಿ ನೋಡಿದಾಗ, ನನ್ನ ದೇಹ ನೀಡಿದ ಮುನ್ಸೂಚನೆಗಳನ್ನು ಗಮನಿಸಿದ್ದು ಮತ್ತು ಮೊದಲೇ ಸಹಾಯ ಪಡೆದಿದ್ದು ನನ್ನನ್ನು ಕೇವಲ ಒಂದು ಅಂಕಿ ಅಂಶವಾಗಿಸದೆ, ಒಬ್ಬ ಕ್ಯಾನ್ಸರ್ ವಿಜೇತನನ್ನಾಗಿ ಮಾಡಿದೆ ಎಂದು ಅರಿವಾಗುತ್ತಿದೆ. 'ಜೀರೋ ಟು ಹೀರೋ' ನಂತಹ ಯೋಜನೆಗಳು ಜನರಿಗೆ ಒಂದು ವಿಷಯವನ್ನು ನೆನಪಿಸುತ್ತವೆ, ಅದೇನೆಂದರೆ ಕ್ಯಾನ್ಸರ್ ಎಂದರೆ ಯಾವಾಗಲೂ ಭಯ ಅಥವಾ ನಷ್ಟ ಉಂಟು ಮಾಡುವುದಿಲ್ಲ; ನೀವು ಸಮಯಕ್ಕೆ ಸರಿಯಾಗಿ ಸ್ಪಂದಿಸಿದರೆ ದೊಡ್ಡ ಭರವಸೆಯೂ ದೊರೆಯಬಲ್ಲದು. ಆರಂಭಿಕ ಹಂತದ ಪತ್ತೆಯು ನನಗೆ ಕೇವಲ ಹೋರಾಡುವುದರ ಮೇಲೆ ಮಾತ್ರವಲ್ಲದೆ, ಬದುಕುವ ಕಡೆಗೆ ಗಮನ ಹರಿಸಲು ಅವಕಾಶ ನೀಡಿತು, ಅದೇ ನನ್ನ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿತು" ಎಂದು ಹೇಳಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium