ಸಕ್ಕರೆನಾಡಲ್ಲಿ ಸಿದ್ದಗಂಗಾಶ್ರೀಗಳ ಸಸ್ಯಧಾಮ ಸದ್ದುಗದ್ದಲವಿಲ್ಲದ ಸಾಧಕ- ಪ್ರಕೃತಿಯ ಆರಾಧಕ - 'ಹಸಿರಿನ ನಾಯಕ' ಕಾಯಕಯೋಗಿ ಶಿವಕುಮಾರ್
ಮಂಡ್ಯ :
ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಎಂಬ ಅಣ್ಣ ಬಸವಣ್ಣನವರ ವಚನದಂತೆ ಸದ್ದುಗದ್ದಲವಿರದೆ ಸಮಾಜ ಸೇವೆಯಲ್ಲಿ ನಿರತವಾಗಿರುವ ಪತ್ರಕರ್ತ ಎಂ.ಶಿವಕುಮಾರ್.
ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ ಎಂಬ ತತ್ವಕ್ಕೆ ಅಂಟಿಕೊಂಡ ಅಸಾಧ್ಯ ಸಾಧಕ.
`ಕಾಯಕವೇ ಕೈಲಾಸವೆಂಬ' ದಿವ್ಯಮಂತ್ರವನ್ನು ಆದರ್ಶವನ್ನಾಗಿಸಿಕೊಂಡು ಸದಾ ಜನೋಪಯೋಗಿ ಕಾರ್ಯದಲ್ಲಿ ನಿರತರಾಗಿರುವ ಕಾಯಕಯೋಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಹಿರಿಯಪತ್ರಕರ್ತ ಎಂ.ಶಿವಕುಮಾರ್ ತಮ್ಮ ಕಾಯಕದ ದುಡಿಮೆಯ ಹಣದಿಂದ ನೂರಾರು ಮಂದಿ ರೈತರಿಗೆ, ಮಹಿಳೆಯರಿಗೆ, ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸುತ್ತಾ ಬಂದಿದ್ದಾರೆ.
ಹಸಿರೀಕರಣದ ಜಾಗೃತಿ ಮೂಡಿಸುತ್ತಿರುವ ಶಿವಕುಮಾರ್ ಅವರ ಸಾಧನೆಗೆ ಮಂಡ್ಯನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿಯವರ ಉದ್ಯಾನವನ ಹಾಗೂ ಧ್ಯಾನಕೇಂದ್ರ ಸಾಕ್ಷಿಯಾಗಿ ನಿಂತಿದೆ.
ಬಿರುಬೇಸಿಗೆಯಲ್ಲೂ ಬಾಡದ ಹಸಿರು, ಮನಸ್ಸಿಗೆ ಮುದ ನೀಡುವ ಸಿದ್ದಗಂಗಾಶ್ರೀಗಳ ಧ್ಯಾನಕೇಂದ್ರ, ಪ್ರಾಣಿ ಪಕ್ಷಿಗಳಿಗೂ ನೀರಿನ ಹೊಂಡ, ಅಹ್ಲಾದಕರ ಹಾಗೂ ಪ್ರಶಾಂತ ವಾತಾವರಣ.
ಹಸಿರಿನ ಉದ್ಯಾನವನ ಮಾತ್ರವಲ್ಲ ಸಿದ್ದಗಂಗಾಶ್ರೀಗಳು ನೆಲೆಸಿರುವ ದೇವರವನ ಎನ್ನುವಷ್ಟರ ಮಟ್ಟಿಗೆ ಮನೋಲ್ಲಾಸ ನೀಡುವ ನೆಮ್ಮದಿಯ ತಾಣದ ನಂದನವನ ಮಂಡ್ಯದಲ್ಲಿ ಮೈದಳೆದಿದೆ.
ವಾಯುವಿಹಾರಿಗಳು, ವಯೋವೃದ್ಧರ ತವರುಮನೆಯಂತೆ ರೂಪುಗೊಂಡಿರುವ ಸಿದ್ದಗಂಗಾಶ್ರೀಗಳ ಉದ್ಯಾನವನವನ್ನು ಯುವಕ-ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಅಧ್ಯಯನ ಕೇಂದ್ರವನ್ನಾಗಿಸಿಕೊಂಡಿದ್ದಾರೆ.
ಶ್ರೀ ಸಿದ್ದಗಂಗಾಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರು ದಯಪಾಲಿಸಿದ ಲಕ್ಷಾಂತರ ರೂ.ಬೆಲೆಬಾಳುವ ಶಕ್ತಿದಾಯಕ ಸಿದ್ದಗಂಗಾಶ್ರೀಗಳ ಕಂಚಿನ ಪುತ್ಥಳಿಯನ್ನು ಉದ್ಯಾನವನದ ಧ್ಯಾನಕೇಂದ್ರದಲ್ಲಿ ಪ್ರತಿಷ್ಠಾಪಿಸಿರುವುದು ಜನಾಕರ್ಷಣೀಯ ಹಾಗೂ ಭಕ್ತಿಯ ಸಂಗಮವಾಗಿದೆ.
`ಸಸ್ಯವೇ ನಮ್ಮ ಸಂದೇಶ-ಪರಿಸರ ಸೇವೆಯೇ ಶಿವಪೂಜೆ' ಎಂಬ ಹಸಿರುವಾದ ತಮ್ಮದಾಗಿಸಿಕೊಂಡಿರುವ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಅವರ ನಿಸ್ವಾರ್ಥ ಸೇವೆ, ಅವಿರತ ಶ್ರಮ, ಮುತ್ಸದ್ಧಿತನ, ದುಡಿಮೆಯ ಫಲದಿಂದಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಉದ್ಯಾನವನದ ಮರಗಳು `ಹರಿಶಿಣ-ಕುಂಕುಮ' ಬಣ್ಣದಿಂದ ಕನ್ನಡಮಯವಾಗಿದ್ದು ರಾತ್ರಿ ವೇಳೆಯೂ ಪಾರ್ಕ್ ಆಕರ್ಷಕ ಲೈಟ್ ಬೆಳಕಿನಿಂದ ಜಗಮಗಿಸುತ್ತಿದೆ.
ಮಂಡ್ಯನಗರ ಪ್ರವೇಶಿಸುತ್ತಿದ್ದಂತೆಯೇ ಹಸಿರಿನ ಸ್ವಾಗತ ಕೋರುವ ಉದ್ಯಾನವನದ ಮುಂದಿನ `ಮಹಾದ್ವಾರ' ದೇವಾಲಯದ ಪ್ರವೇಶದ್ವಾರದಂತೆ ಜನರನ್ನು ಅಕರ್ಷಿಸುತ್ತಿದೆ.
ಇಪ್ಪತ್ತು ವರ್ಷಗಳ ಹಿಂದೆ ಮಂಡ್ಯ ನಗರಸಭೆಯಿಂದ ಉದ್ಯಾನವನ್ನು ತಮ್ಮ ಕಾಯಕಯೋಗಿ ಸಂಸ್ಥೆಗೆ ದತ್ತು ಪಡೆದು ನೂರಾರು ವಿವಿಧ ಬಗೆಯ ಸಸಿಗಳನ್ನು ನೆಟ್ಟು ಪೋಷಿಸಿರುವ ಈ ಮಂಡ್ಯದ ಮಾದರಿ ಉದ್ಯಾನವನದಲ್ಲಿ ಮರಗಳ ಸಾಮ್ರಾಜ್ಯವನ್ನೇ ಕಟ್ಟಿರುವ ಪ್ರಕೃತಿಯ ಆರಾಧಕ ಶಿವಕುಮಾರ್ ಅವರು `ಕಾಯಕಯೋಗಿ ಫೌಂಡೇನ್' ಟ್ರಸ್ಟ್ ಮೂಲಕ ನೂರಾರು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಪತ್ರಿಕೋದ್ಯಮದಲ್ಲಿಯೂ ವಿಭಿನ್ನ ಪ್ರಯತ್ನಗಳ ಮೂಲಕ ಅಪಾರ ಜನಮನ್ನಣೆಗಳಿಸಿರುವ ಶಿವಕುಮಾರ್ ತಮ್ಮ ಒಡನಾಡಿ ಪತ್ರಕರ್ತ ಎಲ್.ಸಂದೇಶ್ ಜೊತೆಯಲ್ಲಿ ಹೊರತಂದ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳ ಡೈರೆಕ್ಟರಿ 'ಜನನಾಯಕರು' ರಾಜಕೀಯ ಇತಿಹಾಸದ ಮೈಲಿಗಲ್ಲು.
ಪತ್ರಿಕೋದ್ಯಮ ಹಾಗೂ ಜನಸೇವೆಯನ್ನು ಗುರುತಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ. ಮಂಡ್ಯ ಜಿಲ್ಲಾಡಳಿತ ಕನ್ನಡರಾಜ್ಯೋತ್ಸವ, ಶ್ರೀ ಸಿದ್ದಗಂಗಾ ಮಠ ' ಸಂಘಸಿರಿ' ಹಾಗೂ ಬೆಂಗಳೂರು ಡ್ರೆಸ್ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಿವೆ.
ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಸಮಾನ ಮನಸ್ಕರ ಜೊತೆಗೂಡಿ 2009ರಲ್ಲಿ ಉದಯವಾದ ಕಾಯಕಯೋಗಿ ಹಮ್ಮಿಕೊಂಡು ಬಂದಿರುವ ನೂರಾರು ಜನೋಪಯೋಗಿ ಕಾರ್ಯಗಳ ಪಕ್ಷಿ ನೋಟ.
* ನೆರೆಹಾವಳಿಗೆ ತುತ್ತಾದ ಉತ್ತರ ಕರ್ನಾಟಕದ ಮಂದಿಗೆ `ಚಪಾತಿ ಬುತ್ತಿ' ರವಾನೆ.
* ಮಂಡ್ಯದಲ್ಲಿ ಕರ್ನಾಟಕರತ್ನ, ಪದ್ಮಭೂಷಣ, ನಡೆದಾಡುವ ದೇವರು ಸಿದ್ದಗಂಗಾಶ್ರೀಗಳ ಶುಭ ನಾಮದಲ್ಲಿ ಬೃಹತ್ ಉದ್ಯಾನವನ ಹಾಗೂ ಧ್ಯಾನಕೇಂದ್ರ ಸ್ಥಾಪನೆ ಹಾಗೂ ನಿರ್ವಹಣೆ.
* ಪರಮಪೂಜ್ಯರ ನುಡಿಮುತ್ತುಗಳ ಸಂಗ್ರಹಣೆ `ಶ್ರೀವಾಣಿ' ಕೃತಿ ಮುದ್ರಣ ಹಾಗೂ ಉಚಿತವಾಗಿ ಸಹಸ್ರಾರು ಪ್ರತಿಗಳನ್ನು ರಾಜ್ಯಾದ್ಯಂತ ವಿತರಣೆ.
* ಪರಮಪೂಜ್ಯರ ಜೀವನ ಸಾಧನೆ ಹಾಗೂ ಶ್ರೀಮಠದ ಇತಿಹಾಸ ಸಾರುವ `ಲೋಕಜಂಗಮ' ಸಾಕ್ಷö್ಯಚಿತ್ರವನ್ನು ಮಂಡ್ಯ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಪ್ರದರ್ಶನ.
* ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸರ್ಕಾರಿ ಕಾರ್ಯಕ್ರಮಗಳ ಯಶಸ್ವಿಗೆ ಸಹಕಾರ.
* ಮಹನೀಯರ ಜನ್ಮದಿನಾಚರಣೆ. ಆರೋಗ್ಯಶಿಬಿರ, ಕನ್ನಡರಾಜ್ಯೋತ್ಸವದ ಅಂಗವಾಗಿ `ಮಂಡ್ಯ ಮ್ಯಾರಥಾನ್' ಕನ್ನಡ ಜಾಗೃತಿ ಓಟ ಹಾಗೂ ನೂರಾರು ಮಂದಿ ಸಾಧಕರಿಗೆ `ಕಾಯಕಶ್ರೀ' ಪ್ರಶಸ್ತಿ ಪ್ರಧಾನ.
* ಪ್ರತಿ ತಿಂಗಳ ಹುಣ್ಣಿಮೆಯಂದು ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರುವ `ದಾಸೋಹ ಹುಣ್ಣಿಮೆ' ಆಚರಣೆ-ನೂರಾರು ಮಂದಿಗೆ ದಾಸೋಹ ವಿತರಣೆ.
ಅನ್ನ-ಅರಿವು-ಆಸರೆ ಪ್ರತಿಯೊಬ್ಬರಿಗೂ ದೊರಕಬೇಕೆಂಬ ಆದರ್ಶದೊಂದಿಗೆ ಜನರಿಗಾಗಿ, ಜನರಿಗೋಸ್ಕರ, ಜನರಿಂದಲೇ ಸಾಗಿಬಂದಿರುವ ಜನೋಪಯೋಗಿ ಕಾಯಕಯೋಗಿ ಸಮೂಹ ಸಂಸ್ಥೆ ಕಳೆದ ಇಪ್ಪತ್ತು ವರ್ಷಗಳಿಂದ ಪತ್ರಕರ್ತರಾದ ಎಂ.ಶಿವಕುಮಾರ್ ಅವರ ಸಾರಥ್ಯದಲ್ಲಿ ನೂರಾರು ಸೇವಾ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬರುತ್ತಿದೆ.
- ಮನಸಾ ಗೌಡ
ಸಹಾಯಕ ಪ್ರಾಧ್ಯಾಪಕಿ
ಸ್ಕೂಲ್ ಆಫ್ ಮೀಡಿಯಾ ಸ್ಟಡೀಸ್
ಗಾರ್ಡನ್ ಸಿಟಿ ಯೂನಿವರ್ಸಿಟಿ
ಬೆಂಗಳೂರು
Comments
Post a Comment