2007ರಲ್ಲಿ ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಟೌನ್ ಶಿಪ್ ವಿರೋಧಿಸಿದ್ದರು: ಹೆಚ್.ಡಿ.ಕುಮಾರಸ್ವಾಮಿ


ಬೆಂಗಳೂರು, ಜೂನ್ 22, 2026

ಬಿಡದಿ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ರಾಜ್ಯದ ಹಾಲಿ ಮುಖ್ಯಮಂತ್ರಿ 2007ರಲ್ಲಿ ವಿಧಾನಸಭೆ ಕಲಾಪದಲ್ಲಿ ಹೇಳಿದ್ದ ಮಾತುಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಅಸೆಂಬ್ಲಿಯಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿದ್ದ ಹಾಲಿ ಸಿಎಂ ಡಿಕೆ ಶಿವಕುಮಾರ್

ಕಳೆದ 500 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವವರು ಅಸಲಿ ರೈತರಲ್ಲ ಎನ್ನುತ್ತಿರುವ ಮುಖ್ಯಮಂತ್ರಿಗೆ ನೇರ ಸವಾಲು ಹಾಕಿದ ಕೇಂದ್ರ ಸಚಿವರು; ಬನ್ನಿ ಬೈರಮಂಗಲದ ಪ್ರತಿಭಟನಾ ಸ್ಥಳಕ್ಕೆ. ಅಲ್ಲಿ ಕೂತಿರುವವರು ಅಸಲಿ ರೈತರೋ ಅಥವಾ ನಕಲಿ ರೈತರೋ ಎಂಬುದು ನಿಮಗೆ ಗೊತ್ತಾಗುತ್ತದೆ. ನಾನು ಸಿದ್ಧನಿದ್ದೇನೆ, ಭೈರಮಂಗಲಕ್ಕೆ ಬರುವುದಕ್ಕೆ ನೀವು ಸಿದ್ಧರಿದ್ದೀರಾ? ಎಂದರು.


ರಿಯಲ್ ಎಸ್ಟೇಟ್ ದುರಾಸೆಯಿಂದ ಮುಗ್ಧ ರೈತರಿಂದ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ದಂಧೆಕೋರರಿಗೆ ನೀಡಲು ಬ್ರೋಕರ್ ಕೆಲಸ ಮಾಡುತ್ತಿರುವ ಈ ಸರ್ಕಾರದ ನೇತೃತ್ವ ವಹಿಸಿರುವ ನಾಯಕರು ಇದೇ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ವಿಧಾನ ಕಲಾಪದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರಲ್ಲಿ ಹಾಲಿ ಮುಖ್ಯಮಂತ್ರಿ ಪ್ರಮುಖರು. ನೋಡಿದರೆ ಟೌನ್ ಶಿಪ್ ಯೋಜನೆಯನ್ನು ಕಾರ್ಯಗತ ಮಾಡಿಯೇ ತೀರುತ್ತೇನೆ ಎಂದು ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಬಿಡದಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅಂದು ದೊಡ್ಡ ಗಂಟಲಿನಲ್ಲಿ ವಿರೋಧಿಸಿದವರು ಇಂದು ಯೋಜನೆಯ ಪರವಾಗಿ ಮಾತಾಡುತ್ತಿದ್ದಾರೆ. ಇದು ವಿರೋಧಾಭಾಸ. ಪ್ರಮುಖವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರು ಹಾಲಿ ಮುಖ್ಯಮಂತ್ರಿ ನಡೆಸುತ್ತಿರುವ ಅಕ್ರಮಗಳನ್ನು ನೋಡಿಕೊಂಡು ಜಾಣಮೌನ ವಹಿಸಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಬಿಡದಿ ಸೇರಿದಂತೆ ಐದು ಟೌನ್ ಶಿಪ್ ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ನಾನೇ. 23.9.2009 ರಂದು ಟೌನ್ ಶಿಪ್ ಯೋಜನೆ ಬಗ್ಗೆ ತೀರ್ಮಾನ ಮಾಡಲಾಯಿತು. 18.10.2006 ರಂದು ಯೋಜನೆಗೆ ಸರ್ಕಾರದ ವತಿಯಿಂದ ಅಧಿಸೂಚನೆ ಹೊರಡಿಸಲಾಯಿತು. 'ಹೆಚ್.ಡಿ. ಕುಮಾರಸ್ವಾಮಿ ಆರ್ಕಿಟೆಕ್ಟ್ ಆಫ್ ಬಿಡದಿ ಟೌನ್ ಶಿಪ್' ಅಂತಾರೆ. ನಾನು ಇಲ್ಲಾ ಎನ್ನುವುದಿಲ್ಲ. ಆದರೆ, ರೈತರ ಭೂಮಿಯನ್ನು ಕಿತ್ತುಕೊಂಡು ರಿಯಲ್ ಎಸ್ಟೇಟ್'ನವರಿಗೆ ಕೊಡಲು ನಾನು ಈ ಯೋಜನೆಯನ್ನು ರೂಪಿಸಿರಲಿಲ್ಲ. ಹೀಗಾಗಿ ರೈತರು ಬೇಡ ಎಂದ ಕೊಡಲಿ ಮುಲಾಜಿಲ್ಲದೆ ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. ಈಗಲೂ ಶೇಕಡ 80ರಿಂದ 90ರಷ್ಟು ರೈತರು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರಿಗೆ ಅದನ್ನು ಕೈ ಬಿಡಲು ಏನು ಸಮಸ್ಯೆ ಎಂದು ಸಚಿವರು ಪ್ರಶ್ನಿಸಿದರು. 

ಅಂದು ನಾನು ಈ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆಯೇ ರೈತರು, ಬಡವರು, ಫಲವತ್ತಾದ ಭೂಮಿ, ಅರಣ್ಯ ಪ್ರದೇಶ, ಮರಗಳು ಇತ್ಯಾದಿ ಅಂಶಗಳನ್ನು ಮುಂದಕ್ಕೆ ತಂದು ಈಗಿನ ಮುಖ್ಯಮಂತ್ರಿ ಹಾಗೂ ಹಿಂದಿನ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಮೇಲೆ ದೊಡ್ಡ ಯುದ್ಧವನ್ನೇ ಮಾಡಿದ್ದರು. ಅಂದು ವೀರಾವೇಷದ ಮಾತುಗಳನ್ನು ಆಡಿದ್ದ ಕಾಂಗ್ರೆಸ್ ನಾಯಕರು, ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದರು. ಸಮಿತಿಯು ಬಿಡದಿ, ಸೋಲೂರು, ಕಸಬಾ, ಹೊಸಕೋಟೆ ಮುಂತಾದ ಕಡೆಗಳಿಗೆ ಹೋಗಿ ಸತ್ಯಶೋಧನೆ ನಡೆಸಿತ್ತು. ಆದರೆ ಎಚ್.ಕೆ.ಪಾಟೀಲ್ ಅವರು ಸತ್ಯಶೋಧನಾ ವರದಿಯನ್ನು ಏನು ಮಾಡಿದರು ಎಂಬುದೇ ಯಕ್ಷಪ್ರಶ್ನೆ. ವಿಚಿತ್ರವೆಂದರೆ, ಆ ವರದಿಯ ಬಗ್ಗೆ ಮತ್ತು ಕಾಂಗ್ರೆಸ್ ನಾಯಕರ ದ್ವಂದ್ವ ನಿಲುವುಗಳ ಬಗ್ಗೆ ಸದನದಲ್ಲಿ ಸುಮಾರು ಮೂರು ದಿನಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು ಎಂದು ಸಚಿವರು ಮಾಹಿತಿ ನೀಡಿದರು. 


ಅಸೆಂಬ್ಲಿಯಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ 2007 ಆಗಸ್ಟ್ 1ರಂದು ಈ ರಾಜ್ಯದ ಘನತವೇತ್ತ ಹಾಲಿ ಮುಖ್ಯಮಂತ್ರಿ ಉದ್ದುದ್ದ ಭಾಷಣ ಮಾಡಿದ್ದರು. "ಇದು ನಮ್ಮ ಪಕ್ಷದ ಕ್ರೆಡಿಬಲಿಟಿ ವಿಚಾರ. ನಮ್ಮ ಸತ್ಯಶೋಧನಾ ಸಮಿತಿ ವಿಚಾರ ನಮ್ಮ ಕ್ರೆಡಿಬಲಿಟಿ ವಿಚಾರ. ಅದಕ್ಕೋಸ್ಕರ ತಾವು ತಮ್ಮ ಅಧಿಕಾರಿಗಳ ಬಳಿ ಏನು ಪೇಪರ್ ಇವೆ, ಅವರು ಏನು ಪ್ರಪೋಸ್ ಮಾಡಿದ್ದಾರೆ, ನಿಮ್ಮ ಇಂಡಸ್ಟ್ರೀಸ್ ಡಿಪಾರ್ಟ್ಮೆಂಟ್ ನವರು ಕೆಐಎಡಿಬಿ ಟೌನ್ ಶಿಫ್ ನವರು ಏನು ಪ್ರಪೋಸ್ ಮಾಡಿ ಘೋಷಣೆ ಮಾಡಿದ್ದಾರೆ, ಇವೆರಡನ್ನು ಲೆಕ್ಕ ಮಾಡಿಕೊಂಡು ನೀವು ಉತ್ತರಕ್ಕೆ ಬನ್ನಿ. ಯು ಹ್ಯಾವ್ ಆಸ್ಕ್ ಟು ಅಪಾಲಜಿ ಟು ದ ಕಾಂಗ್ರೆಸ್ ಪಾರ್ಟಿ. ಅದರ್ ವೈಸ್ ಯು ಹ್ಯಾವ್ ಟು ವಿತ್ ಡ್ರಾ ಯುವರ್ ಸ್ಟೇಟ್ಮೆಂಟ್" ; ಇದು ಅಂದು ಇಂದಿನ ಮುಖ್ಯಮಂತ್ರಿ ಬಾಯಿಂದ ಉದುರಿದ ಆಣೆಮುತ್ತುಗಳು. ಅಂದು ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರನ್ನು ಉದ್ದೇಶಿಸಿ ಡಿಕೆಶಿ ಅವರು ಈ ಮಾತುಗಳನ್ನು ಹೇಳಿದ್ದರು. ಅಂದು ರೈತರು, ಕೃಷಿ ಭೂಮಿ, ಫಲವತ್ತತೆ, ಮರಗಳು ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಉದ್ದುದ್ದ ಮಾತನಾಡಿದ್ದ ಮಹಾಶಯ ಡಿಸಿಎಂ ಸಿಎಂ ಆದಕೂಡಲೇ ರೈತರ ಭೂಮಿಗೆ ಕನ್ನ ಹಾಕಿರುವುದು ಎಷ್ಟು ಸರಿ ಎಂದು ಸಚಿವ ಕುಮಾರಸ್ವಾಮಿ ಅವರು ಕಟುವಾಗಿ ಪ್ರಶ್ನಿಸಿದರು.

ಆ ಸಂದರ್ಭದಲ್ಲಿ ನಾನು ಎಲ್ಲಿಯೂ ನೀರಾವರಿ ಅಥವಾ ಕೃಷಿ ಆಧರಿತ ಭೂಮಿಯಲ್ಲಿ ಟೌನ್ ಶಿಪ್ ಇಲ್ಲವೇ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಮತಿ ಕೊಡಲು ಒಪ್ಪಿರಲಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಇರಬೇಕು, ಬೇಕಾದರೆ ಪರಿಶೀಲನೆ ಮಾಡಿಕೊಳ್ಳಬಹುದು ಎಂದು ಸಚಿವರು ಹೇಳಿದರು.

ನಿಮ್ಮ ದುಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಎಸಿ ರೂಂನಲ್ಲಿ ಕೂತು ಚರ್ಚೆ ಮಾಡುವ ಜಾಯಮಾನ ನನ್ನದಲ್ಲ. ಬೀದಿಯಲ್ಲಿ ನಿಂತು ಚರ್ಚೆಗೆ ತಯಾರಿದ್ದೇನೆ. ಈಗಲೇ ಹೊರಬಂದು ಬಹಿರಂಗ ಚರ್ಚೆ ನಡೆಸಲು ಸಿದ್ಧನಿದ್ದೇನೆ. ನಿಮಗೆ ಧೈರ್ವಿದ್ದರೆ ಬೈರಮಂಗಲಕ್ಕೆ ಬನ್ನಿ. ಅಲ್ಲೇ ಯೋಜನೆ ಬೇಕೋ ಬೇಡವೋ ಎಂಬುದು ಜನರ ಮುಂದೆ ತೀರ್ಮಾನ ಆಗಿಬಿಡಲಿ. ಅದು ಏನೇನೋ ಚಾಲೆಂಜ್ ಮಾಡುತ್ತಿದ್ದರಲ್ಲ ನನ್ನ ಮೇಲೆ, ಈಗ ಬನ್ನಿ ನಾನು ತಯಾರಿದ್ದೇನೆ. ನನ್ನ ರೈತರಗಾಗಿ ಬಿಡು ಮಾಡಿಕೊಂಡು ಬರುತ್ತೇನೆ ಎಂದು ಡಿಕೆಶಿಗೆ ಸಚಿವ ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.

ವಿಧಾನಸೌಧ ಅಥವಾ ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ನಡೆದರೆ ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ, ಇಲ್ಲವೇ ಕುಮಾರಸ್ವಾಮಿಗೆ ಮಾಹಿತಿ ಹೋಗುತ್ತದೆ ಎಂಬ ಉದ್ದೇಶದಿಂದ ನಾಗರಬಾವಿಯಲ್ಲಿ ಬಾಡಿಗೆ ಮನೆಯಿಂದ ಇವರು ಟೌನ್ಶಿಪ್ ದಂಧೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು. 

ಕೆಲವು ಪುಡಾರಿಗಳು, ಟೌನ್ಶಿಪ್ ಕಿಂಗ್ ಪಿನ್ ಚೇಲಾಗಳು ಸೇರಿಕೊಂಡು ಆ ಮನೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಟೌನ್ ಷಿಪ್ ಗೆ ಸಂಬಂಧಿಸಿದ ಯಾವುದೇ ಕೆಲಸಗಳು ರಾಮನಗರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆಯುತ್ತಿಲ್ಲ. ಎಲ್ಲವೂ ತೆರೆಮರೆಯಲ್ಲಿ ರಹಸ್ಯವಾಗಿ ಮಾಡುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ. ಕುಮಾರಸ್ವಾಮಿ ಏನಪ್ಪಾ ಹರಿದಾ ಎನ್ನುವ ವ್ಯಕ್ತಿ ಈಗ ಹರಿತಿರುವುದು ಏನು ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು. 

ನಿಮ್ಮ ಪಾಪದ ಕೂಡ ತುಂಬಿದೆ. ಎಲ್ಲವನ್ನೂ ಜನರು ನೋಡುತ್ತಿದ್ದಾರೆ. ನಿಮಗೆ ಶಾಸ್ತಿಯಾಗುವ ಕಾಲ ಸನಿಹದಲ್ಲಿದೆ ಎಂದು ಅವರು ಗುಡುಗಿದರು.

ಹೊಸಕೆರೆಹಳ್ಳಿ ನೈಸ್ ರೋಡ್ ಪೆನ್ಷನ್ ಬಳಿ ದೊಡ್ಡ ಅಪಾರ್ಟ್ಮೆಂಟ್ ಗಳು ಎದ್ದು ನಿಂತಿವೆ. ಆ ರಸ್ತೆಯಲ್ಲಿ ಓಡಾಡುವ ಎಲ್ಲರೂ ನೋಡಿರುತ್ತಾರೆ. ಅದ್ಯಾವುದೋ ಶೋಭಾ ಹೆಸರಿನಲ್ಲಿ ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟಿದ್ದಾರೆ. ಅದನ್ನು ಕಟ್ಟಲಿಕ್ಕೆ ಯಾರ ಹೆಸರಿನಲ್ಲಿ ನೈಸ್ ಕಂಪನಿಯಿಂದ ಅನುಭವಿ ಪಡೆದುಕೊಂಡಿದ್ದಾರೆ ಇವರು ಆಗ ಯಾರು ನಿಮ್ಮನ್ನು ಜೈಲಿಗೆ ಕಳಿಸಲಿಲ್ಲ, ಈಗ ರೈತರ ಭೂಮಿ ಡಿ ನೋಟಿಫಿಕೇಶನ್ ಮಾಡಿದರೆ ಯಾರಾದ್ರೂ ಜೈಲಿಗೆ ಕಳಿಸುತ್ತಾರ ಎಂದು ಲೇವಡಿ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕರಾದ ಆರ್ ಮಂಜುನಾಥ್, ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷರಾದ ಹೆಚ್.ಎಂ. ರಮೇಶ್ ಗೌಡ, ಶಾಸಕ ಜವರಾಯಿಗೌಡ, ಮಾಜಿ ಶಾಸಕರಾದ ಕೆಎ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.


Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium