ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಂದ ರಾಜ್ಯದ ದಲಿತರಿಗೆ ವಂಚನೆ: ಜ್ಞಾನಪ್ರಕಾಶ ಸ್ವಾಮೀಜಿ


ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕರುಗಳು ರಾಜ್ಯದ ದಲಿತರಿಗೆ ಮೋಸ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಕಳೆದ 75 ವರ್ಷದಿಂದ ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡು ನಮ್ಮನ್ನು ಅಧಿಕಾರದಿಂದ ದೂರವಿಟ್ಟು ವಂಚಿಸುತ್ತಲೇ ಬರುತ್ತಿದ್ದಾರೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.

ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ದಲಿತ ಶಾಸಕರಿಗೆ ಮಂತ್ರಿ ಪದವಿಯನ್ನ ನೀಡಬೇಕಾದರೆ ಕಾಡಿ ಬೇಡಬೇಕಾಗುತ್ತದೆ. ಜೀತದವರಂತೆ ರಾಜ್ಯದ ಮತ್ತು ರಾಷ್ಟ್ರೀಯ ನಾಯಕರ ಮನೆ ಬಾಗಿಲು ಕಾಯಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬೇಕಾದರೆ ದಲಿತರ ಮತ ಅತೀ ಮುಖ್ಯವಾಗಿದ್ದರೂ, ಕರ್ನಾಟಕದಲ್ಲಿ ಈವರೆಗೆ ದಲಿತ ಮುಖ್ಯಮಂತ್ರಿಯನ್ನು ಕಾಣಲಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಚುನಾವಣೆ ಸಂದರ್ಭದಲ್ಲಿ, ಮುಖ್ಯಮಂತ್ರಿ ಆಯ್ಕೆ ಮಾಡುವಾಗ ನಮ್ಮವರನ್ನು ಮುಖ್ಯಮಂತ್ರಿ ಮಾಡಿ ಎಂದು ದಲಿತರು ಬೀದಿಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಮುಖ್ಯಮಂತ್ರಿಯಾಗುವ ಅರ್ಹತೆ, ಆಸೆ ಇರುವ ನಮ್ಮ ಸಮುದಾಯದ ಶಾಸಕರುಗಳಾದ ಬಿ. ಬಸವಲಿಂಗಪ್ಪ, ಎನ್. ರಾಚಯ್ಯ, ಬಿ. ರಾಚಯ್ಯ, ಕೆ. ಹೆಚ್. ರಂಗನಾಥ್, ಶ್ರೀನಿವಾಸ ಪ್ರಸಾದ್ ರಂತಹ ಹಿರಿಯ ದಲಿತ ಕಾಂಗ್ರೆಸ್ ಕಟ್ಟಾಳುಗಳು, ಅಂಬೇಡ್ಕ‌ವಾದಿಗಳನ್ನು ಕಾಂಗ್ರೆಸ್ ಪಕ್ಷ ಪದೇ ಪದೇ ಬದಿಗೆ ಸರಿಸಿ, ಅನ್ಯಾಯ ಮಾಡುತ್ತಲೇ ಬರುತ್ತಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ. ಎನ್ ಮೂರ್ತಿ ಮಾತನಾಡಿ, 2013-2014ರ ಸಾಲಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಸಂಘಟನೆಗಳು ಮತ್ತು ದಲಿತ ಮುಖಂಡರು ಮನವಿ ಮಾಡಿದ್ದರು. ಪಕ್ಷ ಕಟ್ಟಿ ಬೆಳೆಸಿ, ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ್, ಡಾ. ಹೆಚ್.ಸಿ. ಮಹದೇವಪ್ಪ ಅವರುಗಳನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮೀನಮೇಷ ಎಣಿಸಿ, ದಲಿತರ ಮತ ಬ್ಯಾಂಕ್ ತಪ್ಪುತ್ತದೆ ಎಂದು ಎರಡು ವರ್ಷಗಳ ನಂತರ ಮಂತ್ರಿ ಮಾಡಲಾಯಿತು ಎಂದು ಹೇಳಿದರು.

2023-2024ರ ಸಾಲಿನಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದ ಸ್ಥಾನಗಳನ್ನು ಪಡೆಯಲು ಸಿದ್ದರಾಮಯ್ಯನವರ ಜೊತೆ ಹೆಚ್.ಸಿ. ಮಹಾದೇವಪ್ಪ ಶ್ರಮಿಸಿದ್ದರು. ಅಹಿಂದ ಹೆಸರಿನಲ್ಲಿ ರಾಜ್ಯ ವ್ಯಾಪ್ತಿ ದಲಿತ ಜನಾಂಗವನ್ನು ಎಚ್ಚರಗೊಳಿಸಿದ್ದರು. ಆದರೆ ಈಗಿನ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಹಾದೇವಪ್ಪ ಅವರನ್ನು ಮಂತ್ರಿ ಮಾಡದೇ ಅನ್ಯಾಯ ಮಾಡಿದ್ದಾರೆ ಎಂದರು.

ದಲಿತ ಮುಖಂಡ ಜೈಕಾಂತ್ ಮಾತನಾಡಿ, ಸುಮಾರು 2 ವರ್ಷ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ ಶಿವಕುಮಾರ್ ಎಲ್ಲಾ ಇಲಾಖೆಗಳ ಸರ್ಕಾರಿ ಜಾಹೀರಾತಿನಲ್ಲಿ ತಮ್ಮ ಭಾವಚಿತ್ರವನ್ನು ಪ್ರಕಟಗೊಳ್ಳುವಂತೆ ನೋಡಿಕೊಂಡಿದ್ದರು. ಆದರೆ ಹೊಸ ಸಚಿವ ಸಂಪುಟ ರಚನೆಯಾದ ನಂತರ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಛಾಯಾಚಿತ್ರ ಕಾಣೆಯಾಗಿದ್ದು, ಇದು ದಲಿತರ ಕುರಿತು ಇಬ್ಬಗೆಯ, ತಾತ್ಸಾರ ಮನೋಭಾವವನ್ನು ಪ್ರಚುರಪಡಿಸುತ್ತಿದೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ನಾಯಕರಾದ ಹೆಚ್.ಸಿ ಸಿದ್ದಲಿಂಗಯ್ಯ, ಡಿ. ಶಿವಶಂಕರ್, ಸಿದ್ದಪ್ಪ ಜಿ.ಕೆ.ವಿ.ಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium