ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ದಿ. ಸೂರಜ್‌ ಹೆಗ್ಡೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ; ಸಿಎಂ ಡಿ.ಕೆ. ಶಿವಕುಮಾರ್ ಭಾಗಿ, ನುಡಿನಮನ ಸಲ್ಲಿಕೆ

ಬೆಂಗಳೂರು, ಜೂನ್ 15, 2026

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ದಿ. ಸೂರಜ್‌ ಹೆಗ್ಡೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗಿಯಾಗಿ ನುಡಿ ನಮನ ಸಲ್ಲಿಸಿದರು. ಜತೆಗೆ ಈ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. 

ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ದಿ. ಸೂರಜ್‌ ಹೆಗ್ಡೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ, ನುಡಿನಮನ ಸಲ್ಲಿಸಿದೆ. 


ಇದು ಅತ್ಯಂತ ದುಃಖದ ಸಂಗತಿ. ನಮಗೆಲ್ಲಾ ಒಬ್ಬ ಆತ್ಮೀಯ ಸ್ನೇಹಿತ, ದಕ್ಷ ಕಾರ್ಯಕರ್ತ ಹಾಗೂ ಜನಾನುರಾಗಿ ಮುಖಂಡರನ್ನು ಕಳೆದುಕೊಂಡಂತಾಗಿದೆ. ನನ್ನ ಆತ್ಮೀಯ ಸ್ನೇಹಿತ ಸೂರಜ್‌ ಅವರು ಅತ್ಯಂತ ಆದರ್ಶಪ್ರಾಯವಾದ ಜೀವನವನ್ನು ನಡೆಸಿದವರು. ತ್ಯಾಗ, ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆ - ಈ ಮೂರನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಎಂದಿಗೂ ಯಾವುದೇ ಅಧಿಕಾರ ಅಥವಾ ಸ್ಥಾನಮಾನಕ್ಕೆ ಆಸೆ ಪಡದ ಅವರು, ಯಾವಾಗಲೂ ಪಕ್ಷ ಸಂಘಟನೆಯೇ ಮುಖ್ಯ ಎಂದು ನಂಬಿ ನಡೆದವರು. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ರಕ್ತ ಅವರ ಮೈಯಲ್ಲಿದ್ದ ಕಾರಣಕ್ಕಾಗಿಯೇ ಏನೋ, ಅವರು ಅರಸರ ಆ ಎಲ್ಲ ಜನಪರ ಆದರ್ಶಗಳನ್ನು ತಮ್ಮ ಉಸಿರಾಗಿಸಿಕೊಂಡಿದ್ದರು. ಇಂದು ಅವರು ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟ.

ಕೆಲ ದಿನಗಳ ಹಿಂದೆ ದೇವರಾಜ ಅರಸು ಅವರ ಪುಣ್ಯಸ್ಮರಣೆಯ ದಿನದಂದೇ ಸೂರಜ್ ಅವರು ನನ್ನನ್ನು ಭೇಟಿಯಾಗಿದ್ದರು. ನಾನು ಆಗಾಗ ಒಂದು ಮಾತನ್ನು ಹೇಳುತ್ತೇನೆ, 'ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ; ಜನನ ಉಚಿತ, ಮರಣ ಖಚಿತ'. ಈ ಹುಟ್ಟು ಮತ್ತು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಸಾಧನೆ ಮಾಡಿ ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಸೂರಜ್‌ ಅವರ ಬದುಕಿನ ಬಹುದೊಡ್ಡ ಸಾಧನೆಯೆಂದರೆ ಅದು ಪಕ್ಷದ ಮೇಲಿದ್ದ ನಿಷ್ಠೆ ಮತ್ತು ಅವರ ನಿಸ್ವಾರ್ಥ ತ್ಯಾಗ.

ನಾನು ಇಂದು ಇಲ್ಲಿಗೆ ಒಬ್ಬ ಮುಖ್ಯಮಂತ್ರಿಯಾಗಿ ಬಂದಿಲ್ಲ; ಸೂರಜ್ ಅವರ ಒಡನಾಡಿಯಾಗಿದ್ದ ಒಬ್ಬ ಸಾಮಾನ್ಯ ಕಾಂಗ್ರೆಸ್‌ ಕಾರ್ಯಕರ್ತನಾಗಿ, ಅವರ ಪ್ರೀತಿಯ ಸ್ನೇಹಿತನಾಗಿ ಬಂದಿದ್ದೇನೆ. 'ಸೂರಜ್‌' ಎಂದರೆ ಸೂರ್ಯ. ಸದಾ ಎಲ್ಲರಿಗೂ ಬೆಳಕು ನೀಡುವ ಸೂರ್ಯನಂತೆ ಅವರು ಬದುಕಿದರು. ಕೊನೆಯ ಉಸಿರಿರುವವರೆಗೂ ಮುಖದಲ್ಲಿ ಸದಾ ಮುಗುಳ್ನಗೆಯನ್ನು ಉಳಿಸಿಕೊಂಡೇ ಅವರು ಈ ಲೋಕವನ್ನು ತೊರೆದಿದ್ದಾರೆ.

ಎಲ್ಲರ ಜೊತೆಗೆ ಅಪಾರವಾದ ಸ್ನೇಹ ಮತ್ತು ವಿಶ್ವಾಸವನ್ನು ಸಂಪಾದಿಸಿದ್ದ ಸೂರಜ್‌ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಅಗಲಿಕೆಯ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಾರ್ಥಿಸಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.