ಕಾಂಗ್ರೆಸ್ ಕಿಡಿಗೇಡಿಗಳು ಪೋಸ್ಟರ್ ಚಾಳಿ ಬಿಡದಿದ್ದರೆ ರಾಹುಲ್ ಗಾಂಧಿ ಮನೆಗೆ ಪೋಸ್ಟರ್ ಅಂಟಿಸುತ್ತೇವೆ: ಹೆಚ್.ಎಂ. ರಮೇಶ್ ಗೌಡ ಎಚ್ಚರಿಕೆ

ನವದೆಹಲಿ, 25 ಜೂನ್ 2026

ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ವಿರುದ್ಧ ಹಸಿಸುಳ್ಳಿನ ಪೋಸ್ಟರ್ ಅಭಿಯಾನ ಮುಂದುವರೆಸಿದರೆ ಕಾಂಗ್ರೆಸ್ ನಾಯಕರ ವಿರುದ್ಧ ನವದೆಹಲಿಯಲ್ಲಿ ರಾಹುಲ್ ಗಾಂಧಿ ಮನೆ ಮತ್ತು ಕಾಂಗ್ರೆಸ್ ಪಕ್ಷದ ಕಚೇರಿ ಮುಂದೆಯೇ ನಾವೂ ಪೋಸ್ಟರ್ ಗಳನ್ನು ಅಂಟಿಸಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ.ರಮೇಶ್ ಗೌಡ ಎಚ್ಚರಿಕೆ ನೀಡಿದರು.


ನವದೆಹಲಿಯಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಗೋಡೆಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸುವುದು ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿ ಮತ್ತು ನೈತಿಕ ಅಧಃಪತನವನ್ನು ತೋರಿಸುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಈ ಬಗ್ಗೆ ಆಕ್ರೋಶಗೊಂಡಿದ್ದಾರೆ. ನವದೆಹಲಿಗೆ ಬಂದು ರಾಜ್ಯ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಮತ್ತು ಇನ್ನಿತರೆ ಅಕ್ರಮಗಳ ಬಗ್ಗೆ ಪೋಸ್ಟರ್ ಗಳನ್ನು ಮಾಡಿ ಅಂಟಿಸುತ್ತೇವೆ ಎಂದು ಬಂದಿದ್ದರು. ಅವರೆಲ್ಲರನ್ನು ಕುಮಾರಸ್ವಾಮಿ ಅವರು ಸಮಾಧಾನ ಮಾಡಿ ವಾಪಸ್ ಕಳಿಸಿದರು ಎಂದು ಹೇಳಿದರು.

ಕಾಂಗ್ರೆಸ್ ನವರ ಸಂಸ್ಕೃತಿ ನಮ್ಮ ಪಕ್ಷಕ್ಕೆ ಬರುವುದು ಬೇಡ. ಅವರು ಇಂತಹ ಕಿಡಿಗೇಡಿ ಪೋಸ್ಟರ್ ಗಳನ್ನು ಅಂಟಿಸುತ್ತಿರುವುದು ಇದೇ ಮೊದಲಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದೇವೆ ಎನ್ನುವ ಪಕ್ಷವೊಂದರ ಕಾರ್ಯಕರ್ತರು ಮತ್ತು ಮುಖಂಡರ ಕೆಟ್ಟ ವರ್ತನೆ ಬಗ್ಗೆ ಜನರ ಮುಂದೆ ಹೇಳೋಣ ಎಂದು ಕಾರ್ಯಕರ್ತರನ್ನು ಕೇಂದ್ರ ಸಚಿವರು ಸಮಾಧಾನಪಡಿಸಿದರು ಎಂದು ರಮೇಶ್ ಗೌಡ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಆದರೆ ನಮ್ಮ ನಾಯಕರ ವಿರುದ್ಧ ಇದೇ ರೀತಿಯ ಕೀಳು ಮಟ್ಟದ ಪೋಸ್ಟರ್ ಗಳನ್ನು ಅಂಟಿಸುವುದನ್ನು ಮುಂದುವರಿಸಿದರೆ ನಾವು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮನೆಯ ಗೋಡೆಗಳ ಮೇಲಿನಿಂದಲೇ ಪೋಸ್ಟರ್ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಅವರು ಕಟುವಾಗಿ ಎಚ್ಚರಿಸಿದರು.


ನಾವು ಬಿಡದಿ ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷವು ಕುಮಾರಸ್ವಾಮಿ ಅವರ ಕುಟುಂಬದ ವೈಯಕ್ತಿಕ ತೇಜೋವಧೆ ಮಾಡುವ ಮೂಲಕ ರೈತರ ಹೋರಾಟವನ್ನು ದಿಕ್ಕು ತಪ್ಪಿಸಲು ಸಂಚು ರೂಪಿಸಿದೆ. ಆದರೆ, ರೈತರ ಸಮಾಧಿ ಮೇಲೆ ಬಿಡದಿ ಉಪನಗರ ಯೋಜನೆ ಮಾಡಲಿ ಮುಖ್ಯಮಂತ್ರಿ ಹೊರಟಿದ್ದು, ಇದು ಅವರ ರಾಜಕೀಯ ಬದುಕಿಗೆ ಬಹುದೊಡ್ಡ ಪೆಟ್ಟು ನೀಡಲಿದೆ. ಹೀಗಾಗಿ ಅವರು ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂದು ರಮೇಶ್ ಗೌಡ ಒತ್ತಾಯ ಮಾಡಿದರು. 


ನೂರು ವರ್ಷಗಳ ಇತಿಹಾಸ ಇರುವ ಪಕ್ಷ ಎನ್ನುವ ಕಾಂಗ್ರೆಸ್ ಪಕ್ಷದ ಪೋಸ್ಟರ್ ಸಂಸ್ಕೃತಿಯ ಬಗ್ಗೆ ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರ ವರ್ತನೆ ಅಸಹ್ಯಕರ. ಇಂಥವರಿಗೆ ಪೋಸ್ಟರ್ ಮೂಲಕವೇ ಉತ್ತರ ಕೊಡಬೇಕು ಎನ್ನುವುದು ನಮ್ಮ ಕಾರ್ಯಕರ್ತರ ಆಕ್ರೋಶ. ಆದರೆ ಇಂತಹ ಕೃತ್ಯಗಳು ನಮಗೆ ಬೇಕಿಲ್ಲ ಎಂದು ನಮ್ಮ ನಾಯಕರು ಹೇಳುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕಿಡಿಗೇಡಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. 


ಬಿಡದಿ ಹೋರಾಟವನ್ನು ಕಾಂಗ್ರೆಸ್ ನಾಯಕರು ಬಹಳ ಲಘುವಾಗಿ ಪರಿಗಣಿಸಿದ್ದಾರೆ. ಇದು ಸರಿಯಲ್ಲ, ಎಚ್ಚೆತ್ತುಕೊಳ್ಳದಿದ್ದರೆ ರೈತರೇ ರೊಚ್ಚಿಗೆಳುವ ಪರಿಸ್ಥಿತಿ ದೂರವಿಲ್ಲ. ಈಗಾಗಲೇ ಆ ಭಯ ಕಾಂಗ್ರೆಸ್ ನಾಯಕರಿಗೆ ತಟ್ಟುತಿದೆ. ಬೈರಮಂಗಲದಲ್ಲಿ ಚರ್ಚೆ ಬೇಡ ಎಂದು ಅದೇ ಕಾರಣಕ್ಕೆ ಅವರು ಹೇಳುತ್ತಿರುವಂತೆ ಕಾಣುತ್ತಿದೆ. ಹಿಂದೆ ವಿಠಲೆನಹಳ್ಳಿ ಗೋಲಿಬಾರ್ ಬಗ್ಗೆ ಒಮ್ಮೆ ಇವರು ನೆನಪು ಮಾಡಿಕೊಳ್ಳಬೇಕು. ಅಂತಹ ವಿಷಮ ಪರಿಸ್ಥಿತಿಯನ್ನು ಈ ಸರ್ಕಾರ ಸೃಷ್ಟಿಸುವುದು ಬೇಡ. ಕೂಡಲೇ ಯೋಜನೆಯನ್ನು ಕೈಬಿಡಬೇಕು ಎಂದು ರಮೇಶ್ ಗೌಡ ಆಗ್ರಹಪಡಿಸಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.