'ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ' ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಯೋಜನೆ
ಬೆಂಗಳೂರು, ಜೂನ್ 27, 2026
ಬೆಂಗಳೂರಿನ ಜ್ಯಾನಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಯೋಜಿಸಲಾಗಿತ್ತು.
'ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನೀರಿನ ವಿವಾದ ಹಲವು ವರ್ಷಗಳಿಂದ ಇದೆ. ಜೋಡಣೆಯೇ ಇದಕ್ಕೆ ನದಿಗಳ ಪರಿಹಾರವಾಗಿದ್ದು, ಗೋದಾವರಿ ಮತ್ತು ಕಾವೇರಿ ನದಿ ಜೋಡಣೆ ಯೋಜನೆಯು ಕಾರ್ಯಗತವಾಗಬೇಕು' ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.
'ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ' ಶನಿವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
'ನೀರಿನ ಕೊರತೆಯಿಂದ ಕರ್ನಾಟಕ ಹಾಗೂ ತಮಿಳುನಾಡಿನ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ನನಗೆ ಅರಿವಿದೆ. ಹಿಂದೆ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿದ್ದಾಗ, ನದಿ ಜೋಡಣೆಯ ಮಹತ್ವ ಸಾರಲು ತಮಿಳುನಾಡಿನಾದ್ಯಂತ 93 ದಿನಗಳ ಐತಿಹಾಸಿಕ ರಥಯಾತ್ರೆ ನಡೆಸಿದೆ. ದೇಶದ ಎಲ್ಲ ನದಿಗಳು ಒಂದಕ್ಕೊಂದು ಜೋಡಣೆಯಾಗಿ, ನೀರು ಸದುಪಯೋಗವಾಬೇಕು. ನದಿ ಜೋಡಣೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ದೊಡ್ಡ ಸವಾಲಾಗಿದೆ' ಎಂದು ಹೇಳಿದರು.
'ನದಿಗಳ ಜೋಡಣೆ ಕೇವಲ ಒಂದು ರಾತ್ರಿಯಲ್ಲಿ ಆಗುವ ಕೆಲಸವಲ್ಲ. ಸಣ್ಣ ಸಣ್ಣ ಕಾರ್ಯಕ್ರಮಗಳ ಮೂಲಕ ಸಾಕಾರವಾಗಲಿದೆ. ಲಭ್ಯವಿರುವ ನದಿ ನೀರನ್ನು ರೈತರ ಹಿತದೃಷ್ಟಿಯಿಂದ ಸಮಾನವಾಗಿ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಬೇಕು. ಇದು ಮಾತ್ರ ನೀರಿನ ಸಮಸ್ಯೆಗೆ ಪರಿಹಾರ' ಎಂದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, 'ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದರು. ಇದರಿಂದಾಗಿಯೇ ಅವರು ನಿರ್ಮಿಸಿದ ಬೆಂಗಳೂರು ಈಗ ವಿಶ್ವದ ಪ್ರಮುಖ ನಗರವಾಗಿ ಹೊರಹೊಮ್ಮಿದೆ. ವಿಜ್ಞಾನ, ತಂತ್ರಜ್ಞಾನ, ನವೋದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದೆ' ಎಂದು ಹೇಳಿದರು.
'ಕೆಂಪೇಗೌಡ ಅವರ ದೂರದೃಷ್ಟಿಯ ಪರಿಣಾಮ ಬೆಂಗಳೂರು ವಿಶ್ವದ ಗಮನ ಸೆಳೆದಿದೆ. ವಿಭಿನ್ನ ಆಡಳಿ. ತಗಾರರಾಗಿದ್ದ ಅವರು, ಪರಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿದ್ದರು. ದೊಡ್ಡ ಮಟ್ಟದಲ್ಲಿ ಗಿಡ ಮರಗಳನ್ನು ಬೆಳೆಸಿ, ಜಲ ಮೂಲಗಳನ್ನು ಸಂರಕ್ಷಿಸಿದ್ದರು. ಇದರಿಂದಾಗಿ ನಗರ ನಿರ್ಮಾಣಗೊಂಡು 500 ವರ್ಷಗಳು ಕಳೆದರೂ ಬೆಂಗಳೂರು ಈಗಲೂ ಆಹ್ಲಾದಕರ ವಾತಾವರಣ ಹೊಂದಿದೆ. ದೇಶದ ಉಳಿದ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಹೆಚ್ಚು ಹಸಿರು ನಗರವಾಗಿದೆ' ಎಂದು ಸಿ. ಪಿ. ರಾಧಾಕೃಷ್ಣನ್ ಶ್ಲಾಘಿಸಿದರು.
ಇದೇ ವೇಳೆ ಸಾಮಾಜಿಕ ಕ್ಷೇತ್ರದಿಂದ ಟಿ.ವಿ. ಮೋಹನ್ ದಾಸ್ ಪೈ, ಧಾರ್ಮಿಕ ಕ್ಷೇತ್ರದಿಂದ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಪರಿಸರ ಕ್ಷೇತ್ರದಿಂದ ಎ.ಸಿ.ಲಕ್ಷ್ಮಣ್ ಅವರಿಗೆ 'ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಉಪಸ್ಥಿತರಿದ್ದರು.
Comments
Post a Comment