ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 20ರಿಂದ 'ಫಿಬಾ ಮಹಿಳಾ ಬ್ಯಾಸ್ಕೆಟ್‌ಬಾಲ್ ಲೀಗ್' ಟೂರ್ನಿ ಆಯೋಜನೆ
ಬೆಂಗಳೂರಿನ ಒಲಂಪಿಕ್ ಭವನದಲ್ಲಿ ಉಪಮುಖ್ಯಮಂತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ ಅವರಿಂದ ಮಹತ್ವದ ಪತ್ರಿಕಾಗೋಷ್ಠಿ
ಭಾರತೀಯ ರೈಲ್ವೇ ಸೇರಿದಂತೆ ಏಷ್ಯಾದ ಬಲಿಷ್ಠ ಆರು ಕ್ಲಬ್ ತಂಡಗಳು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇದೇ 20ರಿಂದ 25ರವರೆಗೆ ನಡೆಯಲಿರುವ ಫಿಬಾ ಮಹಿಳಾ ಬ್ಯಾಸ್ಕೆಟ್‌ಬಾಲ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿವೆ.
'ಭಾರತದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಏಷ್ಯಾದ ಪ್ರಮುಖ ಮಹಿಳಾ ಕ್ಲಬ್ ಬ್ಯಾಸ್ಕೆಟ್‌ಬಾಲ್ ಲ್ಲಿ ಟೂರ್ನಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಭಾರತದ ಪ್ರತಿನಿಧಿಯಾಗಿ ರೈಲ್ವೇಸ್ ಸ್ಪರ್ಧಿಸಲಿದೆ. ಆರು ರಾಷ್ಟ್ರಗಳ ಮಹಿಳಾ ವೃತ್ತಿಪರ ಬ್ಯಾಸ್ಕೆಟ್‌ಬಾಲ್‌ನ ಅಗ್ರ ಕ್ಲಬ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ' ಎಂದು ಉಪಮುಖ್ಯಮಂತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರ, ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಮತ್ತು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ವತಿಯಿಂದ ಮತ್ತು ಫಿಬಾ ಏಷ್ಯಾದ ಸಹಕಾರದಲ್ಲಿ ನಡೆಯುತ್ತಿರುವ ಈ ಟೂರ್ನಿಯು ಸಿಲಿಕಾನ್ ಸಿಟಿಯ ಕ್ರೀಡಾಭಿ ಮಾನಿಗಳಿಗೆ ರಸದೌತಣ ನೀಡಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ವಿಶ್ವದರ್ಜೆಯ ಆಟವನ್ನು ಕಣ್ಣುಂಬಿ ಕೊಳ್ಳಬಹುದು ಎಂದು ಹೇಳಿದರು.
ಅರು ತಂಡಗಳನ್ನು ತಲಾ ಮೂರರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ಗುಂಪು ಹಂತದಲ್ಲಿ ತಲಾ ಎರಡು
ಪಂದ್ಯಗಳನ್ನು ಆಡಲಿವೆ. ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. 20ರಿಂದ 22ರವರೆಗೆ ಗುಂಪು ಹಂತದ ಪಂದ್ಯಗಳು, 24ರಂದು ಸೆಮಿಫೈನಲ್ಸ್, 25ರಂದು ಫೈನಲ್ ಪಂದ್ಯ ನಡೆಯಲಿದೆ. ಪ್ರತಿದಿನ ಸಂಜೆ 4 ಮತ್ತು ರಾತ್ರಿ 7 ಗಂಟೆಗೆ ಪಂದ್ಯಗಳನ್ನು ಆಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೂರ್ನಿಯು ಪ್ರತಿಷ್ಠಿತ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಕ್ಯಾಲೆಂಡರ್‌ನಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಜೊತೆಗೆ ಮುಂದಿನ ಪೀಳಿಗೆಯ ಆಟಗಾರರಿಗೆ ಸ್ಫೂರ್ತಿಯಾಗಿದೆ. ಪ್ರತಿ ತಂಡದಲ್ಲಿ ಅಮೆರಿಕ, ಆಸ್ಟ್ರೇಲಿಯಾ ಅಥವಾ ಯುರೋಪ್‌ನ ಇಬ್ಬರು ಆಟಗಾರ್ತಿಯರು ಇರಲಿದ್ದು, ಸ್ಪರ್ಧೆಯ ಗುಣಮಟ್ಟವನ್ನು ಹೆಚ್ಚಿಸಲಿದೆ' ಎಂದು ಫಿಬಾ ಏಷ್ಯಾ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದರಾಜ್ ಹೇಳಿದರು.
Comments
Post a Comment